Tuesday, July 21, 2026
spot_imgspot_img
spot_imgspot_img

ಮಂಗಳೂರು: ಸಾವಿನ ದವಡೆಯಿಂದ ವ್ಯಕ್ತಿಯನ್ನು ರಕ್ಷಿಸಿದ ಪಣಂಬೂರು ಪೊಲೀಸರು

- Advertisement -
- Advertisement -

ಮಂಗಳೂರು: ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದ ಹಾಸನ ಜಿಲ್ಲೆಯ ಕೃಷಿಕನೊಬ್ಬನನ್ನು ಪಣಂಬೂರು ಪೊಲೀಸರು ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಮೇ 22ರಂದು ಸಂಜೆ ನಡೆದಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ಸಮೀಪದ ಗ್ರಾಮದ ನಿವಾಸಿಯಾಗಿರುವ ಕೃಷಿಕನು ಆರೋಗ್ಯ ಹಾಗೂ ಸಣ್ಣ ಮಟ್ಟಿನ ಹಣಕಾಸು ಸಮಸ್ಯೆಯಿಂದ ಮನನೊಂದು ಬೆಳಿಗ್ಗೆ ಮನೆಯಿಂದ ಯಾರಿಗೂ ತಿಳಿಸದೇ ಹೊರಟಿದ್ದಾನೆ. ಮೊಬೈಲ್ ಫೋನ್‌ನ್ನು ಮಾತ್ರ ಆನ್‌ನಲ್ಲಿ ಇಟ್ಟುಕೊಂಡಿದ್ದ ಆತ, ಮನೆಯವರು ಹಾಗೂ ಸಂಬಂಧಿಕರು ಸಂಪರ್ಕಿಸಿದಾಗ ತನ್ನ ಇರುವಿಕೆ ಬಗ್ಗೆ ಹೇಳದೇ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾನೆ.

ಸಂಜೆ ವೇಳೆಗೆ ಆತ ಪಣಂಬೂರು ಬೀಚ್ ಸಮೀಪ ಇರುವ ಬಗ್ಗೆ ಮಾಹಿತಿ ಪಡೆದ ಸಂಬಂಧಿಕರು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮೂಲಕ ಪಣಂಬೂರು ಪೊಲೀಸ್ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್ ಅವರನ್ನು ಸಂಪರ್ಕಿಸಿ ಸಹಾಯ ಕೋರಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪೊಲೀಸ್ ಕಮೀಷನರ್ ಕಚೇರಿಯ ತಾಂತ್ರಿಕ ಘಟಕದ ಸಹಕಾರದೊಂದಿಗೆ ವ್ಯಕ್ತಿಯ ಹುಡುಕಾಟ ಆರಂಭಿಸಿದ್ದಾರೆ. ಮೊಬೈಲ್ ಮೂಲಕ ಸಂಪರ್ಕ ಸಾಧಿಸಿ ಕೌನ್ಸೆಲಿಂಗ್ ನಡೆಸಿದರೂ ವ್ಯಕ್ತಿ ಸ್ಪಂದಿಸಿರಲಿಲ್ಲ. ಬಳಿಕ ಸುಮಾರು ಒಂದೂವರೆ ಗಂಟೆಗಳ ಶೋಧ ಕಾರ್ಯಾಚರಣೆಯ ನಂತರ ಸಂಜೆ 7 ಗಂಟೆ ಸುಮಾರಿಗೆ ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಪತ್ತೆಹಚ್ಚಿ ರಕ್ಷಿಸಿದ್ದಾರೆ.

ವ್ಯಕ್ತಿ ಪತ್ತೆಯಾದ ಸ್ಥಳವು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದರೂ, ಜೀವ ಉಳಿಸುವ ಉದ್ದೇಶದಿಂದ ಸರಹದ್ದಿನ ಬಗ್ಗೆ ಚಿಂತಿಸದೇ ಸಕಾಲಿಕ ಕ್ರಮ ಕೈಗೊಂಡು, ಅವರನ್ನು ಪಣಂಬೂರು ಠಾಣೆಗೆ ಕರೆತಂದು ಆಹಾರ, ನೀರು ನೀಡಿ ಕೌನ್ಸೆಲಿಂಗ್ ನಡೆಸಿ ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ ಎಂಬ ಅರಿವು ಮೂಡಿಸಿದ್ದಾರೆ. ನಂತರ ಸಂಬಂಧಿಕರೊಂದಿಗೆ ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಡಲಾಗಿದೆ.

ಇದೇ ರೀತಿ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ತಣ್ಣೀರು ಬಾವಿ ಬೀಚ್‌ನಲ್ಲಿ ತನ್ನ ನಾಲ್ಕು ವರ್ಷದ ಸಣ್ಣ ಮಗಳೊಂದಿಗೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವ್ಯಾಟ್ಸಾಪ್‌ನಲ್ಲಿ ವಿಡಿಯೋ ಹರಿಬಿಟ್ಟು ನಂತರ ತನ್ನ ಮನೆಗೆ ಹೋಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದ ತಂದೆ ಮತ್ತು ಮಗಳ ಪ್ರಾಣ ರಕ್ಷಿಸಿದ್ದ ಪಣಂಬೂರು ಪೊಲೀಸರ ಮಾನವೀಯ ಕಾರ್ಯ ವ್ಯಾಪಕ ಪ್ರಶಂಸೆಗೆ ಒಳಗಾಗಿತ್ತು.ಅದಾಗಿ ಆರು ತಿಂಗಳಲ್ಲಿ ಹಾಸನ ಮೂಲದ ಕೃಷಿಕರೊಬ್ಬರ ಜೀವ ರಕ್ಷಿಸುವ ಮೂಲಕ ಪಣಂಬೂರು ಪೊಲೀಸರು ತಮ್ಮ ಸಕಾಲಿಕ ಸಮಯಪ್ರಜ್ಞೆಯಿಂದ ಮೂರನೇ ಅಮೂಲ್ಯ ಜೀವವನ್ನು ಉಳಿಸಿದಂತಾಗಿದೆ.

ಕಾರ್ಯಾಚರಣೆಯಲ್ಲಿ ಪಣಂಬೂರು ಪೊಲೀಸ್ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್, ಸಬ್‌ಇನ್ಸ್‌ಪೆಕ್ಟರ್ ಜ್ಞಾನಶೇಖರ್, ಎಎಸ್ಐ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿಗಳಾದ ಸುರೇಂದ್ರ, ದೀಪಕ್, ಇಮ್ತಿಯಾಝ್, ರಾಕೇಶ್, ಫಕ್ಕಿರೇಶ್, ಶರಣ ಬಸವ, ಅನ್ವರ್, ಮಂಜುನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!