

ಅಡ್ಯನಡ್ಕ: ಇಲ್ಲಿನ ಜನತಾ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಶಾಲಾ ಸಂಚಾಲಕರಾದ ಡಾ. ಅಶ್ವಿನಿ ಕೃಷ್ಣಮೂರ್ತಿ ಅವರು ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಬಳಿಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಸರಬರಾಜು ಮಾಡಲಾದ ಉಚಿತ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಲಾಯಿತು. ಆಡಳಿತ ಮಂಡಳಿಯ ಸದಸ್ಯ ಜಯಾನಂದ ಉಳಯ, ಎ. ಗೋವಿಂದರಾಯ ಶೆಣೈ ಹಾಗೂ ಕೆ. ಸದಾಶಿವ ಹೊಳ್ಳ ಅವರು ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಟಿ. ಆರ್. ನಾಯ್ಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಬಸ್ ವ್ಯವಸ್ಥೆಯ ಬಗ್ಗೆ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ನಾಡಗೀತೆ, ರಾಷ್ಟ್ರಗೀತೆ ಹಾಡಿದರು. ಕನ್ನಡ ಅಧ್ಯಾಪಕ ಶಿವಕುಮಾರ್ ಸಾಯ ಕಾರ್ಯಕ್ರಮ ನಿರೂಪಿಸಿ, ಹಿರಿಯ ಶಿಕ್ಷಕ ಎಸ್. ರಾಜಗೋಪಾಲ ಜೋಶಿ ಅವರು ವಂದಿಸಿದರು.
ಶಾಲಾ ಪ್ರಾರಂಭೋತ್ಸವ ಪ್ರಯುಕ್ತ ಶಾಲೆಯನ್ನು ತಳಿರು ತೋರಣಗಳು, ಬಣ್ಣ ಬಣ್ಣದ ಬಲೂನ್‌ಗಳಿಂದ ಅಲಂಕರಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು. ಮಧ್ಯಾಹ್ನ ಬಿಸಿಯೂಟದೊಂದಿಗೆ ಪಾಯಸದ ಔತಣವನ್ನು ವಿದ್ಯಾರ್ಥಿಗಳಿಗೆ ಉಣಬಡಿಸಲಾಯಿತು.








