ಹುಟ್ಟೂರಿನ ಜನರ ಸೇವೆಗೆ ಮುಂದಾದ ಡಾ. ಜಯಪ್ರಕಾಶ ಕೊಂಕೋಡಿ
ಕಬಕದಲ್ಲಿ ಕ್ಲಿನಿಕ್ ಶುಭಾರಂಭ; ಸೇವಾ ಶುಲ್ಕ ಬರೀ 10 ರೂ.



ಕಬಕ: ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಇಡ್ಕಿದು ಗ್ರಾಮದ ನಿವಾಸಿ ಹಾಗೂ ಮಂಗಳೂರು ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಜಯಪ್ರಕಾಶ ಕೊಂಕೋಡಿ ಅವರು “ಸೇವೆಯೇ ಪರಮ ಧರ್ಮ” ಎಂಬ ಧ್ಯೇಯದೊಂದಿಗೆ ತಮ್ಮ ಹುಟ್ಟೂರಿನ ಪ್ರೀತಿಯ ಜನರಿಗೋಸ್ಕರ 10 ರೂ. ಶುಲ್ಕಪಡೆದು ಜನರ ಸೇವೆ ಮಾಡಲು ಮುಂದಾಗಿದ್ದಾರೆ.
ಯುಗಾದಿ ಹಬ್ಬದ ಅಂಗವಾಗಿ ಮಾರ್ಚ್ 19 ರಂದು ಕಬಕದಲ್ಲಿರುವ ಇದ್ದಿದು ಸೇವಾ ಸಹಕಾರಿ ಬ್ಯಾಂಕ್ ಶಾಖೆ ಬಳಿ ಕ್ಲಿನಿಕ್‌ನ್ನು ಶುಭಾರಂಭಗೊಳಿಸಲಾಗುತ್ತಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಪುತ್ತೂರಿನ ಹಿರಿಯ ಶಸ್ತ್ರ ಚಿಕಿತ್ಸಕ ಡಾ. ಎಂ.ಕೆ. ಪ್ರಸಾದ್ ಹಾಗೂ ಹಿರಿಯ ವೈದ್ಯರಾದ ಡಾ. ಸುರೇಶ್ ಪುತ್ತುರಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ. ಜಯಪ್ರಕಾಶ ಕೊಂಕೋಡಿ (ಎಂಬಿಬಿಬಿಎಸ್, ಎಂಡಿ, ಡಿಎಂ) ಅವರು ಸಾಮಾನ್ಯ ರೋಗಗಳು ಹಾಗೂ ತುರ್ತು ಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ್ದು, ಗ್ರಾಮೀಣ ಜನತೆಗೆ ಕಡಿಮೆ ಶುಲ್ಕದಲ್ಲಿ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಸೇವೆಯನ್ನು ಆರಂಭಿಸುತ್ತಿದ್ದಾರೆ.
ಇವರ ತಂದೆ ಕೊಂಕೋಡಿ ಪದ್ಮನಾಭ ಅವರು ಈ ಹಿಂದೆ ಕ್ಯಾಂಪ್ಕೋ ಅಧ್ಯಕ್ಷರಾಗಿ ಸಹಕಾರ ಭಾರತೀ ಇದರ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಸಮಾಜ ಸೇವೆಯನ್ನು ಮಾಡುತ್ತಿದ್ದರು.
ಇಲ್ಲಿ ಕೇವಲ ₹10 ಸೇವಾ ಶುಲ್ಕದಲ್ಲಿ ರೋಗಿಗಳಿಗೆ ಚಿಕಿತ್ಸೆ ಮತ್ತು ಸಮಾಲೋಚನೆ ನೀಡಲಾಗುವುದು.
ಪ್ರತಿ ಗುರುವಾರ ಮಧ್ಯಾಹ್ನ 3ರಿಂದ ಸಂಜೆ 5 ಗಂಟೆಯವರೆಗೆ (ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ) ಕ್ಲಿನಿಕ್ ಕಾರ್ಯನಿರ್ವಹಿಸಲಿದೆ.ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಕುರಿತು ಸಮಾಲೋಚನೆ, ಬಹು ಅಂಗಾಂಗ ಸಂಬಂಧಿತ ಸಂಕೀರ್ಣ ಕಾಯಿಲೆಗಳ ಕುರಿತು ಸಲಹೆ ಹಾಗೂ ಜನೌಷಧಿ ಬಳಕೆಯ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ.
ಚಿಕಿತ್ಸೆ ಪಡೆಯಲು ಬರುವವರು ಒಂದು ದಿನ ಮುಂಚಿತವಾಗಿ ಮಾಹಿತಿ ನೀಡಿದರೆ ಸೇವೆ ನೀಡಲು ಸುಲಭವಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 98677 68221 ಮತ್ತು 94498 18221 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಈ ಸೇವಾ ಕ್ಲಿನಿಕ್ ಆರಂಭವಾಗುತ್ತಿರುವುದು ಸ್ಥಳೀಯರಲ್ಲಿ ಸಂತಸ ತಂದಿದೆ.








