



ಅಂತರಂಗದಿ ನೂರು ಭಾವವ ಹೊತ್ತು ಬಾಹ್ಯದ ಬಣ್ಣದ ಲೋಕವ ಕಾಣುವ ಹಂಬಲದಿ ಮನಸು ಒದ್ದಾಡಿದರೂ ಕಾಣಲಾಗದೇ ಮನಸು ಕನಲುವಾಗ ಆ ಕನಸಿಗೂ ಒಂದು ಬೆಳಕಿನ ಹಾದಿ ತೋರಿದ ಮಹಾನುಭಾವ ಲೂಯಿಸ್ ಬ್ರೈಲ್. ಬಾಹ್ಯದ ದೃಷ್ಟಿ ಗೋಚರಿಸದಿದ್ದರೂ ಅಂತರಂಗದ ದಿವ್ಯ ದೃಷ್ಟಿಯೊಳಗೆ ಅಂತರಂಗದ ಕಣ್ಣು ಸದಾ ಬೆಳಕಿನತ್ತಲೇ ಹಾತೊರೆಯುತ್ತಿರುವ ಅಂಧರಿಗೆ ಬೆಳಕಿನ ದೀಪವಾದವರು ಲೂಯಿಸ್ ಬ್ರೈಲ್.
ಅಂಧರ ಲೋಕದ ಮೈನವಿರೇಳಿಸಿದ ಕತ್ತಲ ಕಣ್ಣುಗಳಲ್ಲಿ ಬೆಳಕು ಹೊಳೆಯುವಂತೆ ಮಾಡಿದ ಲೂಯಿಸ್ ಬ್ರೈಲ್ ಅವರು ಜನವರಿ 4, 1809ರಂದು ಫ್ರಾನ್ಸ್ ನ ಕುಪ್ರೆಯಲ್ಲಿ ಒಂದು ಬಡ ಕುಟುಂಬದಲ್ಲಿ ಸೈಮನ್ ರೆ ಬ್ರೈಲ್ - ಮೋನಿಕಾ ಬ್ರೈಲ್ ದಂಪತಿಗಳ ಮಗನಾಗಿ ಜನಿಸಿದರು. ತಂದೆ ಸೈಮನ್ ಕುದುರೆ ಸವಾರರಿಗೆ ಚರ್ಮದ ಜೀನ್ ತಯಾರಿಸುವ ಕೆಲಸ ಮಾಡುತ್ತಿದ್ದರು. ಮೂರು ವರ್ಷವಾಗಿದ್ದಾಗ ಆಟವಾಡುತ್ತ ತಂದೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದ ಲೂಯಿ ಚೂಪಾದ ದಬ್ಬಣ ತೆಗೆದುಕೊಂಡು ಅಲ್ಲಿ ಬಿದ್ದಿದ್ದ ಚರ್ಮಕ್ಕೆ ಚುಚ್ಚುತ್ತಿದ್ದಾಗ ಕೈಯಲ್ಲಿದ್ದ ದಬ್ಬಣ ಅವರ ಎಡಕಣ್ಣಿಗೆ ಚುಚ್ಚಿ ಕಣ್ಣಿನಿಂದ ರಕ್ತ ಸುರಿಯಲಾರಂಭಿಸಿತು. ಆಗಿನ್ನೂ ಔಷಧಗಳು ಅಷ್ಟಾಗಿ ಇರದ ಕಾರಣ ಕೆಲವು ಗಿಡಮೂಲಿಕೆಗಳಿಂದ ಕಣ್ಣಿಗೆ ಚಿಕಿತ್ಸೆ ನೀಡಿದರು. ದಿನ ಕಳೆದಂತೆ ಕಣ್ಣು ಕೆಂಪಾಗಿ ಊದಿಕೊಂಡು ಕೀವು ಉಂಟಾಗಿ ಸೋಂಕಾಗಿ ಬಲಗಣ್ಣಿಗೂ ಹರಡಿದ ಪರಿಣಾಮ ಎಲ್ಲವೂ ಮಸುಕಾಯಿತು. ಕ್ರಮೇಣ ತನ್ನ ಐದನೇ ವಯಸ್ಸಿನಲ್ಲಿ ಅವರು ಶಾಶ್ವತವಾಗಿ ಕುರುಡರಾದರು. ಇದು ಅವನ ಜೀವನವನ್ನೇ ಬದಲಾಯಿಸಿ ಸಾಧನೆಯ ಹಾದಿ ತೆರೆಸಿತು. ಕಣ್ಣು ಕಳೆದುಕೊಂಡರೂ ಓದಿನ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು ತಮ್ಮ 15ನೇ ವಯಸ್ಸಿನಲ್ಲಿ ಶಾಲೆಯಲ್ಲಿ ಒಂದು ತುಂಡು ಕಾಗದದ ಮೇಲೆ ಚುಕ್ಕೆಗಳನ್ನು ಮಾಡುವ ಮೂಲಕ ಈ ಬ್ರೈಲ್ ಲಿಪಿ ರೂಪಿಸಿದರು. ಇದು ಅಂಧರ ಬದುಕಿಗೆ ಒಂದು ಹೊಸ ಹಾದಿಯನ್ನು ತೆರೆಯಿತು. ಅವರ ಆತ್ಮವಿಶ್ವಾಸದ ಸಾಧನೆಗಳಿಗೆ ಹೆದ್ದಾರಿಯಾಯಿತು. ಬ್ರೈಲ್ ಅವರ ಬದುಕು ಮತ್ತು ಮಾಡಿದ ಸಾಧನೆಗಳೇ ಅನೇಕ ಅಂಧರ ಬದುಕಿಗೆ ಸ್ಫೂರ್ತಿಯ ಸೆಲೆಯಾಗಿದೆ.
ಅಂಧರ ಶಾಲೆ ಸೇರಿ ತಾನು ಅಂಧ ಎಂದು ಅರಿವಾದರೂ ಎಂದಿಗೂ ಧೈರ್ಯ ಕಳೆದುಕೊಳ್ಳದ ಲೂಯಿ ಕಲಿಕೆಯಲ್ಲಿ ಅತ್ಯಂತ ಆಸಕ್ತಿ ಹೊಂದಿದ್ದರು. ಕಣ್ಣಿನ ಸಮಸ್ಯೆ ಕಾಣಿಸಿಕೊಂಡ ನಂತರ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾದರೂ ಅವರೆಂದೂ ಜಗ್ಗಲಿಲ್ಲ. ತನ್ನಂತೆಯೇ ಅಂಧರು ಅನುಭವಿಸುವ ತೊಂದರೆಗಳ ಬಗ್ಗೆ ಅರಿತುಕೊಂಡರು.
ಪ್ಯಾರಿಸ್‌ನ ದಿ ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಬ್ಲೈಂಡ್ ಯೂತ್ ಸಂಸ್ಥೆ ನಡೆಸುವ ಶಾಲೆಗೆ ಸೇರಿದರು. ಅಲ್ಲಿ ತಾಮ್ರದ ತಂತಿಯಿಂದ ವರ್ಣಮಾಲೆಯ ಅಕ್ಷರಗಳನ್ನು ರೂಪಿಸಿ, ಕಾಯಿಸಿ ಮೇಣದ ಕಾಗದಗಳ ಮೇಲೆ ಒತ್ತಲಾಗುತ್ತಿದ್ದು, ಇದರಲ್ಲಿ ಶಬ್ದಗಳು ಅಸ್ಪಷ್ಟವಾಗಿ ಮೂಡಿ ಅಕ್ಷರಗಳ ವ್ಯತ್ಯಾಸ ಕಂಡು ಹಿಡಿಯುವುದು ಕಷ್ಟವಾಗಿತ್ತು. ಫ್ರಾನ್ಸ್ ಸಿಪಾಯಿ ಪಡೆಯ ನಾಯಕ ಚಾರ್ಲ್ಸ್ ಬಾರ್ಬಿಯೆ ರಹಸ್ಯ ಸಂದೇಶಗಳನ್ನು ರವಾನಿಸಲು ರೂಪಿಸಿದ ಇರುಳು ಬರೆವಣಿಗೆ ಎಂಬ ವಿಧಾನದಲ್ಲಿ ಶಬ್ದಗಳಿಗೆ ಸಾಂಕೇತಿಕವಾಗಿ ಉಬ್ಬಿದ ಚುಕ್ಕೆ ಹಾಗೂ ಗೆರೆಗಳನ್ನು ಬಳಸಲಾಗುತ್ತಿದ್ದರೂ ಈ ವಿಧಾನವೂ ಸಹ ಅಂಧರ ಕಲಿಕೆಗೆ ಪೂರಕವಾಗಿರಲಿಲ್ಲ. ಇದು ಅವರು ಹೊಸ ಲಿಪಿ ರೂಪಿಸಲು ಕಾರಣವಾಯಿತು.
ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಜಗತ್ತಿನಲ್ಲಿ ಸುಮಾರು 39 ಮಿಲಿಯನ್ ಜನರು ಅಂಧರಾಗಿದ್ದು, ಸುಮಾರು 253 ಮಿಲಿಯನ್ ಜನರು ಒಂದಲ್ಲ ಒಂದು ರೀತಿಯ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರೆಲ್ಲರಿಗೂ ಈ ಬ್ರೈಲ್ ಲಿಪಿಯು ಒಂದು ವರದಾನವಾಗಿದೆ.
ಬ್ರೈಲ್ ಲಿಪಿಯಲ್ಲಿ ಅಂಧರು ಸ್ಪರ್ಶದ ಮೂಲಕ ಓದುತ್ತಾರೆ ಮತ್ತು ಬರೆಯುತ್ತಾರೆ. ಇದರಲ್ಲಿ ಕಾಗದದಲ್ಲಿ ಎತ್ತರವಿರುವ ಅಕ್ಷರಗಳ ಸ್ಪರ್ಶದಿಂದ ಕಲಿಸಲಾಗುತ್ತದೆ. ಇದು ಅದೆಷ್ಟೋ ಅಂಧರು ಅಕ್ಷರ ಲೋಕದಲ್ಲಿ ಪಯಣಿಸಲು ಸಾಧ್ಯತೆಯನ್ನು ಕಲ್ಪಿಸಿಕೊಟ್ಟಿತು. ಅಂಧರು ಮತ್ತು ಅಂಧರಲ್ಲದವರ ನಡುವಿನ ಸಾಕ್ಷರತೆ, ಶಿಕ್ಷಣ, ಉದ್ಯೋಗದ ಅಸಮಾನತೆಯನ್ನು ಬದಲಾಯಿಸಿದ ಈ ಲಿಪಿಯು ಇಂದು ಅತ್ಯಾಧುನಿಕ ತಂತ್ರಜ್ಞಾನದ ಕಲಿಕೆಯ ಸಾಧನಗಳ ನಡುವೆ ಮಹತ್ವವನ್ನು ಕಳೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಅಕ್ಷರಗಳು, ಸಂಖ್ಯೆಗಳು ಮತ್ತು ಸಂಕೇತಗಳಿಂದ ಕೂಡಿದ ಲಿಪಿಗೆ ಬದಲಾಗಿ ಆಧುನಿಕ ಕಾಲಘಟ್ಟದಲ್ಲಿ ಆಡಿಯೋ ಪುಸ್ತಕಗಳು ಬಂದಿವೆ. ಓದಲು ಮತ್ತು ಬರೆಯಲು ಬಳಸಲಾಗುವ ಬ್ರೈಲ್ ಲಿಪಿಯ ದೊಡ್ಡ ಗಾತ್ರದ ಪುಸ್ತಕಗಳನ್ನು ಈಗ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಅಳವಡಿಸಿಕೊಂಡು ಆಧುನಿಕವಾಗಿ ರೂಪಾಂತರಗೊಳಿಸಲಾಗಿದೆ. ಆದರೆ ಇದು ಇನ್ನೂ ಗ್ರಾಮೀಣ ಪ್ರದೇಶಗಳ ಸರಿಯಾಗಿ ತಲುಪದೇ ಇರುವ ಕಾರಣ ತಂತ್ರಜ್ಞಾನದ ಲಭ್ಯತೆಯ ಕೊರತೆಯಿಂದಾಗಿ ಇನ್ನೂ ಭಾರದ ಪುಸ್ತಕಗಳ ಅವಲಂಬನೆಯೇ ಮುಂದುವರಿದಿದೆ. ಅದರಲ್ಲೂ ಪ್ರೌಢ ಶಿಕ್ಷಣದವರೆಗೆ ನಿರಂತರ ಬಳಕೆಯಾಗುವ ಬ್ರೈಲ್ ಲಿಪಿ ನಂತರದಲ್ಲಿ ಬಳಕೆಯಾಗುವುದು ಅತಿ ಕಡಿಮೆ.

ಉನ್ನತ ಶಿಕ್ಷಣದಲ್ಲಿ ಬ್ರೈಲ್ ಪುಸ್ತಕಗಳ ಕೊರತೆಯ ಜೊತೆಗೆ ಅವುಗಳ ತೂಕದಿಂದಾಗಿ ಓದುವವರೂ ಕಡಿಮೆ. ತಾವೇ ಪದವೊಂದನ್ನು ಬರೆಯುವುದಕ್ಕೂ, ಕೇಳಿಸಿಕೊಂಡು ತಿಳಿದುಕೊಳ್ಳುವುದಕ್ಕೂ ವ್ಯತ್ಯಾಸವಿದ್ದು, ಅಕ್ಷರಗಳ ಖಚಿತ ಪರಿಚಯ, ಅರಿವು ಪಡೆಯಲು ಬ್ರೈಲ್ ಲಿಪಿ ಕಲಿಯಬೇಕಿದೆ. ಆದರೆ ಡಿಜಿಟಲೀಕರಣದ ಪರಿಣಾಮ ಕಲಿಯುವುದರಲ್ಲಿ ಮತ್ತು ಕಲಿಕೆಯನ್ನು ಉತ್ತೇಜಿಸಬೇಕಾದವರಲ್ಲಿ ಆಸಕ್ತಿ ಕಡಿಮೆ ಆಗಿದೆ. ಜೊತೆಗೆ ಪುಸ್ತಕಗಳ ಹುಡುಕಾಟ ಕೂಡಾ ಕಷ್ಟ. ಹೀಗಿರುವಾಗ ಆಧುನಿಕ ತಂತ್ರಜ್ಞಾನಗಳ ಮೂಲಕ ಲಿಪಿಯನ್ನು ಇನ್ನಷ್ಟು ಅಂಧಸ್ನೇಹಿಯನ್ನಾಗಿಸಬೇಕಾದ ಅವಶ್ಯಕತೆಯಿದೆ.
✍ಡಾ. ಮೈತ್ರಿ ಭಟ್, ವಿಟ್ಲ








