


ಮಂಗಳೂರು: ಕರಾವಳಿಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸ್ ಇಲಾಖೆಯು ತಳಮಟ್ಟದಲ್ಲೂ ಭಾರೀ ಸರ್ಜರಿ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸುಮಾರು 56 ಪೊಲೀಸ್ ಸಿಬ್ಬಂದಿಗಳ ವರ್ಗಾವಣೆ ಮಾಡಲಾಗಿದೆ. ಭಾರೀ ವರ್ಷಗಳಿಂದ ಒಂದೇ ಕಡೆ ತಳ ಊರಿದ್ದ ಸಿಬ್ಬಂದಿಗಳ ಸ್ಥಳಾಂತರ ಮಾಡಲಾಗಿದೆ. ಮುಖ್ಯವಾಗಿ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಹೆಸರು ಥಳಕು ಹಾಕಿಕೊಂಡಿದ್ದ ಬಜ್ಪೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ರಶೀದ್ ಶೇಕ್ ಅವರನ್ನು ಕೂಡಾ ವರ್ಗಾವಣೆ ಮಾಡಲಾಗಿದೆ.
ಕೊಲೆ ಕೃತ್ಯದಲ್ಲಿ ರಶೀದ್ ಶಾಮೀಲಾಗಿರುವುದಾಗಿ ಬಿಜೆಪಿ ನಾಯಕರು ಅಂದು ನೇರವಾಗಿ ಆರೋಪ ಮಾಡಿದ್ದರು. ಇದೀಗ ಮಂಗಳೂರು ಮಹಿಳಾ ಠಾಣೆಗೆ ರಶೀದ್ ವರ್ಗಾವಣೆ ಮಾಡಲಾಗಿದೆ. ಒಟ್ಟು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 56 ಸಿಬ್ಬಂದಿ ಹಾಗೂ ಹಲವು ಸಿಸಿಬಿ ಸಿಬ್ಬಂದಿಗಳಿಗೂ ವರ್ಗಾವಣೆ ಮಾಡಲಾಗಿದೆ.
ಭಾರೀ ವರ್ಷಗಳಿಂದ ತಳ ಊರಿದ್ದ ಪೊಲೀಸ್ ಸಿಬ್ಬಂದಿ ವರ್ಗಾವಣೆ ಮಾಡಬೇಕೆಂದು ಒತ್ತಡ ಕೇಳಿ ಬಂದಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳಲು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರಿಂದ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೂಡಾ ನೀಡಿದ್ದರು. ಅದರ ಭಾಗವಾಗಿ ಪೊಲೀಸ್ ಸಿಬ್ಬಂದಿಗಳ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ವರ್ಗಾವಣೆ ಆದೇಶ ಹೊರಡಿಸಿದ್ದಾರೆ.








