


ತೆಲಂಗಾಣ: ಕಬ್ಬಿಣದ ಸ್ಟ್ಯಾಂಡ್ ಹಿಡಿದು ಬರುತ್ತಿದ್ದವರಿಗೆ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ದಂಡೇಪಲ್ಲಿ ಮಂಡಲದ ಮೇದರಿಪೇಟೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮೇದರಿಪೇಟೆಯ ಸಲ್ಲಾ ಲಕ್ಷ್ಮೀನಾರಾಯಣ ಮತ್ತು ವೆಲನೂರು ಗ್ರಾಮದ ಚಂದನಗರಿ ನಾಗರಾಜು ಎಂದು ಗುರುತಿಸಲಾಗಿದೆ. ಮಂಚೇರಿಯಲ್ ಜಿಲ್ಲೆಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಹತ್ತಿರ ಈ ದುರಂತ ಸಂಭವಿಸಿದೆ.ಮೂವರು ಕೂಲಿ ಕಾರ್ಮಿಕರು ಪೆಟ್ರೋಲ್ ಬಂಕ್ ಬಳಿ ಎತ್ತರದ ಕಬ್ಬಿಣದ ಸ್ಟ್ಯಾಂಡ್ ಅನ್ನು ಸಾಗಿಸುತ್ತಿದ್ದರು. ಆಗ ಆ ಸ್ಟ್ಯಾಂಡ್ ಆಕಸ್ಮಿಕವಾಗಿ ಮೇಲಿದ್ದ 11 KV ಹೈ-ಟೆನ್ನನ್ ವಿದ್ಯುತ್ ತಂತಿಗೆ ತಗುಲಿದೆ. ಕಬ್ಬಿಣದ ಸ್ಟ್ಯಾಂಡ್ ಮೂಲಕ ವಿದ್ಯುತ್ ಹರಿದಿದ್ದರಿಂದ ಇಬ್ಬರೂ ಕಾರ್ಮಿಕರು ತೀವ್ರವಾಗಿ ಸುಟ್ಟು ಹೋಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಅದೃಷ್ಟವಶಾತ್, ಅವರ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಮೃತರ ಪೈಕಿ ಒಬ್ಬರ ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.








