

ವಿಟ್ಲ : ಶಾಲಾರಂಭದ ಸಂಭ್ರಮ ಕಳೆದ ಕೂಡಲೆ ವಿದ್ಯಾರ್ಥಿ ಮಂಡಲ ರಚನೆಯ ಕಳೆ ವಿದ್ಯಾರ್ಥಿ ಗಳಲ್ಲಿ ಮೂಡುವುದು ಸಾಮಾನ್ಯ. ನಾಯಕ ನಾಯಕಿ ಸ್ಥಾನ ಗಿಟ್ಟಿಸಿ ಕೊಳ್ಳುವ ತವಕಕ್ಕಾಗಿ ವಿಭಿನ್ನ ಪ್ರಯತ್ನ. ಆಶ್ವಾಸನೆ ಭರವಸೆಗಳ ಮಹಪೂರ.
ಮುದ್ದು ಪುಟಾಣಿಗಳ ಮನದೊಳಗೆ ರಾಜಕೀಯ ಅನುಭವಗಳು ಮೊಳಕೆಯೊಡೆದು ಒಪ್ಪಂದ ಮೈತ್ರಿಗಳ ಧ್ವನಿ ಕೇಳುತಿತ್ತು. ಕೊಟ್ಟಿರುವ ಇತಿ ಮಿತಿಗಳಲ್ಲಿ ಪ್ರಚಾರ, ಮತ ಗಳಿಸುವ ಮತ ಯಾಚನೆಗಳ ಕಲರವದ ಜೊತೆಗೆ ಚುರುಕಿನ ಶಾಲಾ ಚುನಾವಣೆ ನಡೆದಿದ್ದುದು ವಿಠಲ ಜೇಸಿ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ.10ನೇ ತರಗತಿಯ ನಾಲ್ಕು ವಿದ್ಯಾರ್ಥಿಗಳು ಶಾಲಾ ನಾಯಕ ಸ್ಥಾನಕ್ಕೆ ಹಾಗೂ 7ನೇ ತರಗತಿಯ 12 ವಿದ್ಯಾರ್ಥಿಗಳು ಉಪನಾಯಕ ಸ್ಥಾನಕ್ಕೆ ಚುನಾವಣಾ ಕಣದಲ್ಲಿದ್ದರು.
ಚುನಾವಣೆ ಪ್ರಕ್ರಿಯೆಯ ಬಗ್ಗೆ ಶಿಕ್ಷಕಿ ಧನಲಕ್ಷ್ಮಿ ಯವರು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿ ಅಭ್ಯರ್ಥಿಗಳು ಸಾಮೂಹಿಕ ಮತ ಯಾಚನೆ ನಡೆಸಿದರು. ಶಾಲಾ ಪ್ರಾಂಶುಪಾಲ ಜಯರಾಮ ರೈ ಯವರು ಚುನಾವಣೆಯಲ್ಲಿ ನಾಯಕನ ಆಯ್ಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುತ್ತಾ, ಅರ್ಹ ವಿದ್ಯಾರ್ಥಿ ನಾಯಕನ ಆಯ್ಕೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು ಎಂಬುದನ್ನು ಮನದಟ್ಟು ಮಾಡಿದರು.ಸಾಮಾನ್ಯ ಮತದಾನದ ಪ್ರಕ್ರಿಯೆಗಳನ್ನು ಅನುಸರಿಸಿ ಶಾಲಾ ಮತದಾನವನ್ನು ನಡೆಸಲಾಯಿತು.

ಮತದಾನ ಫಲಿತಾಂಶ :- ಹತ್ತನೇ ತರಗತಿಯ ಜ್ಞಾನೇಶ್ ಶಾಲಾ ನಾಯಕನಾಗಿ ಹಾಗೂ 7ನೇ ತರಗತಿಯ ನಿಧೀಕ್ಷ ಉಪನಾಯಕ ಸ್ಥಾನಕ್ಕೆ ಆಯ್ಕೆಯಾದರು. ಸಹ ಶಿಕ್ಷಕಿ ಸುಜಾತಾ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ದೈಹಿಕ ಶಿಕ್ಷಣ ಶಿಕ್ಷಕ ಭಾನುಪ್ರಕಾಶ್ ಹಾಗೂ ಶಿಕ್ಷಕಿ ಶಶಿಕಲಾ ಚುನಾವಣಾ ಕಾರ್ಯಕ್ರಮವನ್ನು ಸಂಯೋಜಿಸಿದರು.