Friday, April 26, 2024
spot_imgspot_img
spot_imgspot_img

ಕಸ್ತೂರಿ ರಂಗನ್ ವರದಿಗೆ ಒಕ್ಕೊರಲ ವಿರೋಧವಿದೆ : ಕೇಂದ್ರಕ್ಕೆ ರಾಜ್ಯದ ನಿಲುವು ತಿಳಿಸಿದ ಸಿಎಂ ಬೊಮ್ಮಾಯಿ

- Advertisement -G L Acharya panikkar
- Advertisement -

vtv vitla

ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪರಿಸರ ವಲಯ ಎಂದು ಘೋಷಿಸುವುದರಿಂದ ಪಶ್ಚಿಮಘಟ್ಟಗಳಲ್ಲಿ ವಾಸಿಸುವ ಜನರ ಜೀವನಕ್ಕೆ ಧಕ್ಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ರಾಜ್ಯ ಸರ್ಕಾರ ಹಾಗೂ ಈ ಭಾಗದ ಜನತೆಯ ಒಕ್ಕೊರಲಿನ ವಿರೋಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದರು.

ಪಶ್ಚಿಮ ಘಟ್ಟಗಳ ಕಸ್ತೂರಿ ರಂಗನ್ ವರದಿ ಜಾರಿ ಕುರಿತಂತೆ ಪ್ರಸ್ತಾಪಿಸಿದ ಅವರು ಕೇಂದ್ರ ಪರಿಸರ, ಅರಣ್ಯ ಮತ್ತು ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಅವರು ನಡೆಸಿದ ವರ್ಚುವಲ್ ಸಭೆಯಲ್ಲಿ ಈ ಭಾಗದ ಜನರ ಒಕ್ಕೊರಲಿನ ಆಗ್ರಹವನ್ನು ತಿಳಿಸಿದರು.

ಹಿಂದಿನಿಂದಲೂ ಕೂಡ ಕಸ್ತೂರಿರಂಗನ್ ವರದಿಗೆ ಮಲೆನಾಡು ಭಾಗದ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಲ್ಲದೆ ಹಲವಾರು ಚಳುವಳಿಗಳನ್ನು ಮಾಡಿ ಸರ್ಕಾರದ ಗಮನವನ್ನು ಸೆಳೆದಿದ್ದರು, ಕಸ್ತೂರಿರಂಗನ್ ಯೋಜನೆಗೆ ಈ ಭಾಗದಿಂದ ತೀವ್ರ ವಿರೋಧವಿದೆ ಎಂಬ ಸಂದೇಶವನ್ನು ಮಲೆನಾಡಿನ ಭಾಗದ ಜನರು ನೀಡಿದ್ದರು.

ಪಶ್ಚಿಮ ಘಟ್ಟ ಪ್ರದೇಶದ ನಿವಾಸಿಗಳು, ಅಧಿಕಾರಿಗಳು ಮತ್ತು ಸಂಬಂಧಪಟ್ಟ ಎಲ್ಲರೊಂದಿಗೆ ಕೂಲಂಕಷವಾಗಿ ಸಮಾಲೋಚನೆ ನಡೆಸಿ ಕಸ್ತೂರಿ ರಂಗನ್ ವರದಿ ಜಾರಿಯನ್ನು ವಿರೋಧಿಸಿ ರಾಜ್ಯ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ ಎಂಬುದನ್ನು ನಡೆದ ಸಭೆಯ ಗಮನಕ್ಕೆ ತಂದರು.

ಕರ್ನಾಟಕ ರಾಜ್ಯ ಅತಿ ಹೆಚ್ಚು ಅರಣ್ಯ ಪ್ರದೇಶಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ನಮ್ಮ ಸರ್ಕಾರ ಹಾಗೂ ಜನತೆ ಪಶ್ಚಿಮ ಘಟ್ಟದ ಜೀವ ವೈವಿಧ್ಯದ ಸಂರಕ್ಷಣೆಗೆ ಹೆಚ್ಚಿನ ಕಾಳಜಿ ತೋರಿದ್ದೇವೆ. ಅಲ್ಲಿನ ಜೀವ ಸಂಕುಲಕ್ಕೆ ಯಾವುದೇ ತೊಂದರೆಗಳಾಗದಂತೆ ಸಂರಕ್ಷಣೆ ನಡೆಸುತ್ತಿದ್ದೇವೆ, ಯಾವುದೇ ಕಾಯ್ದೆ ಕಾನೂನು ಜಾರಿಯಾಗುವ ಮುನ್ನವೂ ಈ ಭಾಗದ ಜನರು ಇಲ್ಲಿನ ಪ್ರಕೃತಿಗೆ ಸಹಜವಾದ ಕೃಷಿ, ತೋಟಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದು, ಪರಿಸರ ಸ್ನೇಹಿ ಜೀವನ ಶೈಲಿಯನ್ನು ರೂಢಿಸಿಕೊಂಡಿದ್ದಾರೆ, ಪಶ್ಚಿಮ ಘಟ್ಟದ ಸಂರಕ್ಷಣೆಗೆ ಆದ್ಯತೆ ನೀಡುತ್ತಲೇ ಬಂದಿದ್ದಾರೆ. ಈಗಾಗಲೇ ಜೀವ ವೈವಿಧ್ಯ ಸಂರಕ್ಷಣೆ ಕಾಯ್ದೆ, ಅರಣ್ಯ ಸಂರಕ್ಷಣೆ ಕಾಯ್ದೆ ಮೊದಲಾದ ಹಲವಾರು ಕಾನೂನುಗಳಡಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಕಾನೂನು ಜಾರಿಗೆ ತರುವ ಮೂಲಕ ಈ ಭಾಗದ ಜನರ ಜೀವನೋಪಾಯಕ್ಕೆ ಧಕ್ಕೆ ತರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.

ಉಪಗ್ರಹ ಸಮೀಕ್ಷೆಯ ಆಧಾರದಲ್ಲಿ ಕಸ್ತೂರಿ ರಂಗನ್ ವರದಿ ರೂಪಿಸಲಾಗಿದೆ. ಆದರೆ ವಸ್ತುಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ಪ್ರತಿ ಎಕರೆಯನ್ನು ಪ್ರತ್ಯಕ್ಷವಾಗಿ ಸಮೀಕ್ಷೆ ನಡೆಸುವುದರಿಂದ ಜನರ ಪರಿಸರ ಸ್ನೇಹಿ ಜೀವನಶೈಲಿಯನ್ನು ಗಮನಿಸಬಹುದಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.ಈ ಹಿನ್ನೆಲೆಯಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅಧಿಕಾರಿಗಳು ರಾಜ್ಯಕ್ಕೆ ಭೇಟಿ ನೀಡಿ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಕೇಂದ್ರ ಸಚಿವರು ತಿಳಿಸಿದರು.

ಸಭೆಯಲ್ಲಿ ಸಚಿವರಾದ ಅರಗ ಜ್ನಾನೇಂದ್ರ , ಆನಂದ್ ಸಿಂಗ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ ಸೇರಿದಂತೆ ಇತರರಿದ್ದರು.

vtv vitla
vtv vitla
- Advertisement -

Related news

error: Content is protected !!