Friday, March 29, 2024
spot_imgspot_img
spot_imgspot_img

ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಜಪಾನ್​​ ₹3.2 ಲಕ್ಷ ಕೋಟಿ ಹೂಡಿಕೆ ಮಾಡಲಿದೆ: ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೆಹಲಿಯಲ್ಲಿ ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಭಯ ದೇಶಗಳ ನಡುವಿನ ಆರ್ಥಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಇಬ್ಬರೂ ನಾಯಕರು ಚರ್ಚಿಸಿದರು ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ. ಪ್ರಧಾನಿ ಮೋದಿ ಮತ್ತು ಕಿಶಿದಾ ಅವರು 14 ನೇ ಇಂಡೋ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ.

“ಅಕ್ಟೋಬರ್ 2018 ರಲ್ಲಿ ನಡೆದ ಕೊನೆಯ ಶೃಂಗಸಭೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಸಂಬಂಧಗಳಲ್ಲಿನ ಪ್ರಗತಿಯನ್ನು ‘ಅಪರಿಮಿತ’ ಎಂದು ಕರೆದರು. ಇಂದು ಶೃಂಗಸಭೆಯು ನಮ್ಮ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಪರಿಶೀಲಿಸಲು ಮತ್ತು ಬಲಪಡಿಸಲು ಒಂದು ಅವಕಾಶವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ. ಪ್ರಗತಿ, ಸಮೃದ್ಧಿ ಮತ್ತು ಪಾಲುದಾರಿಕೆ ಭಾರತ-ಜಪಾನ್ ಸಂಬಂಧಗಳ ಆಧಾರವಾಗಿದೆ. ಭಾರತದಲ್ಲಿ ಜಪಾನ್ ಕಂಪನಿಗಳಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲು ನಾವು ಬದ್ಧರಾಗಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪಿಎಂ ಫ್ಯೂಮಿಯೊ ಕಿಶಿದಾ ಭಾರತ ಮತ್ತು ಜಪಾನ್ ನಡುವಿನ ತಿಳುವಳಿಕಾ ಒಪ್ಪಂದಗಳ ವಿನಿಮಯ ಮಾಡಿದ್ದಾರೆ. ಸೈಬರ್ ಭದ್ರತೆ, ಸಾಮರ್ಥ್ಯ ನಿರ್ಮಾಣ, ಮಾಹಿತಿ ಹಂಚಿಕೆ ಮತ್ತು ಸಹಕಾರ ಕ್ಷೇತ್ರಗಳಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಭಾರತ-ಜಪಾನ್ ಆರ್ಥಿಕ ಪಾಲುದಾರಿಕೆಯಲ್ಲಿ ಪ್ರಗತಿಯಾಗಿದೆ. ಜಪಾನ್ ಭಾರತದಲ್ಲಿ ಅತಿ ದೊಡ್ಡ ಹೂಡಿಕೆದಾರರಲ್ಲಿ ಒಂದಾಗಿದೆ. ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್‌ನಲ್ಲಿ ಭಾರತ-ಜಪಾನ್ ‘ಒಂದು ತಂಡ-ಒಂದು ಯೋಜನೆ’ಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ ಮೋದಿ. ಅದೇ ವೇಳೆ ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಜಪಾನ್ 5 ಟ್ರಿಲಿಯನ್ ಯೆನ್ (3.2 ಲಕ್ಷ ಕೋಟಿ) ಹೂಡಿಕೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಪಿಎಂ ಕಿಶಿದಾ ಭಾರತದ ಹಳೆಯ ಸ್ನೇಹಿತ. ಅವರು ಜಪಾನ್‌ನ ವಿದೇಶಾಂಗ ಸಚಿವರಾಗಿದ್ದಾಗ ಅವರೊಂದಿಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ನನಗೆ ಅವಕಾಶ ಸಿಕ್ಕಿತು ಎಂದು 14 ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಭಾರತ ಮತ್ತು ಜಪಾನ್ ಸುರಕ್ಷಿತ, ವಿಶ್ವಾಸಾರ್ಹ, ಊಹಿಸಬಹುದಾದ ಮತ್ತು ಸ್ಥಿರವಾದ ಇಂಧನ ಪೂರೈಕೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿವೆ. ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ಇದು ಅತ್ಯಗತ್ಯ ಎಂದಿದ್ದಾರೆ ಮೋದಿ.

ನಮ್ಮ ಎರಡೂ ದೇಶಗಳು ಮುಕ್ತ ಇಂಡೋ-ಪೆಸಿಫಿಕ್‌ಗಾಗಿ ಪ್ರಯತ್ನಗಳನ್ನು ಹೆಚ್ಚಿಸಬೇಕು. ಜಪಾನ್, ಭಾರತದಂತೆ ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಲೇ ಇರುತ್ತದೆ ಮತ್ತು ಉಕ್ರೇನ್ ಮತ್ತು ಅದರ ನೆರೆಯ ರಾಷ್ಟ್ರಗಳಿಗೆ ಬೆಂಬಲವನ್ನು ನೀಡುತ್ತಲೇ ಇರುತ್ತದೆ ಎಂದು ಜಪಾನ್ ಪಿಎಂ ಫ್ಯೂಮಿಯೊ ಕಿಶಿದಾ ಹೇಳಿದ್ದಾರೆ. ಅನೇಕ ಸಮಸ್ಯೆಗಳಿಂದಾಗಿ ಇಡೀ ಜಗತ್ತು ಇಂದು ನಲುಗಿದೆ. ಭಾರತ ಮತ್ತು ಜಪಾನ್ ನಿಕಟ ಪಾಲುದಾರಿಕೆಯನ್ನು ಹೊಂದಬೇಕಿರುವುದು ಅತ್ಯಗತ್ಯ. ನಾವು ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೇವೆ, ಉಕ್ರೇನ್‌ ಮೇಲೆ ರಷ್ಯಾದ ಗಂಭೀರ ಆಕ್ರಮಣದ ಬಗ್ಗೆ ಮಾತನಾಡಿದ್ದೇವೆ. ನಮಗೆ ಅಂತರಾಷ್ಟ್ರೀಯ ಕಾನೂನಿನ ಆಧಾರದ ಮೇಲೆ ಶಾಂತಿಯುತ ಪರಿಹಾರದ ಅಗತ್ಯವಿದೆ. ನಾವು ಆದಷ್ಟು ಬೇಗ ಮುಂದಿನ ಭಾರತ-ಜಪಾನ್ ಮಾತುಕತೆ ನಡೆಸುತ್ತೇವೆ. ಸೈಬರ್ ಭದ್ರತೆಯಲ್ಲಿ ಸಹಕಾರದ ಒಪ್ಪಂದವನ್ನು ನಾವು ಸ್ವಾಗತಿಸುತ್ತೇವೆ. ಜಪಾನ್‌ಗೆ ಭಾರತವು ಅತ್ಯಂತ ಪ್ರಮುಖ ಪಾಲುದಾರ. ಟೋಕಿಯೊದಲ್ಲಿ ಕ್ವಾಡ್ ಶೃಂಗಸಭೆಗೆ ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುತ್ತೇನೆ ಎಂದು ಕಿಶಿದಾ ಹೇಳಿದ್ದಾರೆ.

vtv vitla
vtv vitla
- Advertisement -

Related news

error: Content is protected !!