




ಲಕ್ನೋ: ವೃಂದಾವನದ ಯಮುನಾದಲ್ಲಿ ಪಂಜಾಬ್‌ನಿಂದ ಬಂದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಮಗುಚಿ 10 ಮಂದಿ ಸಾವನ್ನಪ್ಪಿದ್ದು, 22 ಜನರು ಗಾಯಗೊಂಡಿದ್ದು, ಇನ್ನೂ ಐವರು ನಾಪತ್ತೆಯಾಗಿದ್ದಾರೆ.
ಕೇಸಿ ಘಾಟ್ ಬಳಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಆಳವಾದ ನೀರಿಗೆ ಹೋಗಿ ತೇಲುವ ಪಾಂಟೂನ್‌ಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ನೀರಿನ ಮಟ್ಟ ಏರಿಕೆಯಿಂದಾಗಿ ಇತ್ತೀಚೆಗೆ ಈ ಪ್ರದೇಶದಲ್ಲಿ ಒಂದು ಪಾಂಟೂನ್ ಸೇತುವೆಯನ್ನು ತೆರವುಗೊಳಿಸಲಾಗಿತ್ತು. ಕೆಲವು ಪಾಂಟೂನ್ ಡ್ರಮ್‌ಗಳು ನದಿಯಲ್ಲಿ ಉಳಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವುಗಳಲ್ಲಿ ಒಂದು ಈ ಬೋಟ್‌ಗೆ ಡಿಕ್ಕಿ ಹೊಡೆದಿದೆ ಎಂದು ಶಂಕಿಸಲಾಗಿದೆ.
ಮೃತರಲ್ಲಿ ಹೆಚ್ಚಿನವರು ಲುಧಿಯಾನದ ಜಗ್ರಾಂವ್ ಮತ್ತು ದುಗ್ರಿ ಪ್ರದೇಶದವರಾಗಿದ್ದು, ಜಗ್ರಾಂವ್‌ನ ಶ್ರೀ ಬಂಕೆ ಬಿಹಾರಿ ಕ್ಲಬ್‌ನಿಂದ ಸುಮಾರು 120 ಯಾತ್ರಿಕರ ಗುಂಪು ಏ.9 ರಂದು ಎರಡು ಬಸ್‌ಗಳಲ್ಲಿ ವೃಂದಾವನಕ್ಕೆ ನಾಲ್ಕು ದಿನಗಳ ಪ್ರವಾಸಕ್ಕೆ ತೆರಳಿತ್ತು.
ಕವಿತಾ ರಾಣಿ(49), ಚರಂಜಿತ್(40), ಸಪ್ನಾ ಹನ್ಸ್(55), ರಿಕೇಶ್ ಗುಲಾಟಿ, ಮಧುರ್ ಬೆಹ್ಲ್, ಆಶಾ ರಾಣಿ, ಪಿಂಕಿ ಬೆಹ್ಲ್, ಅಂಜು ಗುಲಾಟಿ, ಇಶಾನ್ ಕಟಾರಿಯಾ, ಮಿನು ಬನ್ಸಾಲ್ ಮೃತಪಟ್ಟಿದ್ದಾರೆ. 22 ಮಂದಿ ಗಾಯಗೊಂಡಿದ್ದಾರೆ. ಪಿಂಕಿ, ಮಂಜು, ಸವಿತಾ, ತನೀಶ್ ಜೈನ್, ರೇಖಾ, ರಾಜಿಂದರ್ ಕೌರ್, ಸರೋಜ್ ಮತ್ತು ಡಾಲಿ ಚಿಕಿತ್ಸೆ ಪಡೆಯುತ್ತಿದ್ದು, ಇತರರ ಸ್ಥಿತಿ ಸ್ಥಿರವಾಗಿದೆ. ಮಾಣಿಕ್ ಟಂಡನ್, ಪಂಕಜ್ ಮಲ್ಹೋತ್ರಾ, ರಿಷಬ್ ಶರ್ಮಾ, ಯಶ್ ಭಲ್ಲಾ ಮತ್ತು ಮೋನಿಕಾ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ಸೇವೆಗಳು, ನಾಗರಿಕ ರಕ್ಷಣಾ ತಂಡಗಳು, ಸೇನೆ ಮತ್ತು ಸ್ಥಳೀಯ ಡೈವರ್‌ಗಳು ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿವೆ.








