Sunday, October 4, 2026
spot_imgspot_img
spot_imgspot_img

ಫ್ಲೈದುಬೈ ವಿಮಾನ ಪ್ರಕರಣ: ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ UAE ಉಪ ಪ್ರಧಾನಿಯಿಂದ ಮೆಚ್ಚುಗೆ

- Advertisement -
- Advertisement -



ದುಬೈ: ವಿಮಾನದಲ್ಲಿ ಚಾಕು ದಾಳಿಗೆ ಒಳಗಾದರೂ ಪ್ರಯಾಣಿಕರ ಸುರಕ್ಷತೆಗಾಗಿ ಕಾಕ್‌ಪಿಟ್ ಬಾಗಿಲು ತೆರೆಯುವ ಮೂಲಕ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ನೆರವಾದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಅವರನ್ನು ಯುಎಇ ಉಪ ಪ್ರಧಾನಿ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಶನಿವಾರ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.


ಮಚ್ಚಾರ್ ಅವರು ಅತ್ಯುನ್ನತ ಮಟ್ಟದ ಧೈರ್ಯ, ಜವಾಬ್ದಾರಿ ಹಾಗೂ ಮಾನವ ಜೀವದ ಬಗ್ಗೆ ಕಾಳಜಿ ಪ್ರದರ್ಶಿಸಿದ್ದಾರೆ ಎಂದು ಶೇಖ್ ಹಮ್ದಾನ್ ಶ್ಲಾಘಿಸಿದರು. ಭಾರತೀಯ ಪೈಲಟ್ ತೋರಿದ ಧೈರ್ಯ ಮತ್ತು ವೃತ್ತಿಪರ ನಡೆಗೆ ಯುಎಇಯ ಸಂಪೂರ್ಣ ಮೆಚ್ಚುಗೆ ಇದೆ ಎಂದು ಅವರು ಹೇಳಿದರು.


ದುಬೈ-ಟೆಲ್ ಅವಿವ್ ನಡುವೆ ಸಂಚರಿಸುತ್ತಿದ್ದ ಫ್ಲೈದುಬೈ ವಿಮಾನ FZ1073ರ ಕ್ಯಾಪ್ಟನ್ ಆಗಿದ್ದ ಸ್ಮಿತ್ ಮಚ್ಚಾರ್ ಅವರ ಮೇಲೆ ವಿಮಾನದಲ್ಲಿದ್ದ ಒಮಾನ್ ಪ್ರಜೆ ಹಾಗೂ ಸಹ ಪೈಲಟ್ ಹಮಾಮ್ ಅಲ್-ಹಮ್ಮಮಿ ಚಾಕುವಿನಿಂದ ದಾಳಿ ನಡೆಸಿದ್ದನು. ದಾಳಿಯಲ್ಲಿ ಗಾಯಗೊಂಡಿದ್ದರೂ ಮಚ್ಚಾರ್ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಪ್ರಯಾಣಿಕರು ಕಾಕ್‌ಪಿಟ್‌ಗೆ ತೆರಳಿ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿತ್ತು.
ಬಳಿಕ ವಿಮಾನದಲ್ಲಿದ್ದ ಮತ್ತೊಬ್ಬ ಪೈಲಟ್‌ಗಳ ತಂಡ ವಿಮಾನದ ನಿಯಂತ್ರಣವನ್ನು ವಹಿಸಿಕೊಂಡಿತು. ವಿಮಾನ ಸೌದಿ ಅರೇಬಿಯಾದ ತಬುಕ್‌ನಲ್ಲಿ ಇಳಿಯುವವರೆಗೆ ಪ್ರಯಾಣಿಕರಲ್ಲಿದ್ದ ದಂತವೈದ್ಯರೊಬ್ಬರು ಮಚ್ಚಾರ್ ಅವರಿಗೆ ವೈದ್ಯಕೀಯ ನೆರವು ನೀಡಿದರು.


ಮಚ್ಚಾರ್ ಅವರನ್ನು ಭೇಟಿಯಾದ ಫೋಟೊವನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡ ಶೇಖ್ ಹಮ್ದಾನ್, “ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಅತ್ಯುನ್ನತ ಮಟ್ಟದ ಧೈರ್ಯ, ಜವಾಬ್ದಾರಿ ಮತ್ತು ಮಾನವ ಜೀವದ ಬಗ್ಗೆ ಕಾಳಜಿಯನ್ನು ಪ್ರದರ್ಶಿಸಿದ್ದಾರೆ” ಎಂದು ಶ್ಲಾಘಿಸಿದರು.
“ನಮ್ಮಿಂದ ಮತ್ತು ರಾಷ್ಟ್ರದ ನಾಯಕತ್ವದಿಂದ ಅವರಿಗೆ ಸಂಪೂರ್ಣ ಮೆಚ್ಚುಗೆ ಹಾಗೂ ಪ್ರಶಂಸೆ ಸಲ್ಲುತ್ತದೆ. ಅವರು ನಮ್ಮ ತಂಡದ ಭಾಗವಾಗಿರುವುದಕ್ಕೆ, ನಮ್ಮ ರಾಷ್ಟ್ರದ ಕಥೆಯ ಭಾಗವಾಗಿರುವುದಕ್ಕೆ ಮತ್ತು ಯುಎಇ ಯಾವುದಕ್ಕಾಗಿ ನಿಂತಿದೆಯೋ ಅದರ ಭಾಗವಾಗಿರುವುದಕ್ಕೆ ನಮಗೆ ಹೆಮ್ಮೆಯಿದೆ. ಯುಎಇ ಸಹಾನುಭೂತಿಯ ರಾಷ್ಟ್ರ, ಶಾಂತಿಯ ರಾಷ್ಟ್ರ ಮತ್ತು ಜೀವವನ್ನು ಗೌರವಿಸುವ ರಾಷ್ಟ್ರ,” ಎಂದು ಅವರು ಹೇಳಿದರು.


ಫ್ಲೈದುಬೈ ವಿಮಾನದಲ್ಲಿ ನಡೆದ ದಾಳಿಯನ್ನು ಯುಎಇ ಅಧ್ಯಕ್ಷರ ಸಲಹೆಗಾರ ಅನ್ವರ್ ಗರ್ಗಾಶ್ “ಭಯೋತ್ಪಾದಕ ಕೃತ್ಯ” ಎಂದು ಬಣ್ಣಿಸಿದ್ದಾರೆ. ಆಕಾಶದಲ್ಲಿ ಉಂಟಾದ ಬಿಕ್ಕಟ್ಟಿನ ಸಂದರ್ಭದಲ್ಲಿ ಮಚ್ಚಾರ್ ತೋರಿದ ಧೈರ್ಯ ಮತ್ತು ವೃತ್ತಿಪರತೆಯನ್ನು ಅವರು ಶ್ಲಾಘಿಸಿದರು.
“ಉಗ್ರವಾದ ಮತ್ತು ಭಯೋತ್ಪಾದನೆಯನ್ನು ಎದುರಿಸುವಾಗ ಜಾಗರೂಕತೆ ಮತ್ತು ಮುನ್ನೆಚ್ಚರಿಕೆ ಅತ್ಯಗತ್ಯ. ಅಪಾಯಕಾರಿ ಭಯೋತ್ಪಾದಕ ಕೃತ್ಯ ಹಾಗೂ ಸಂಭವನೀಯ ದುರಂತದ ಸಂದರ್ಭದಲ್ಲಿ ಈ ಭಾರತೀಯ ಪೈಲಟ್ ಧೈರ್ಯ ಮತ್ತು ಜವಾಬ್ದಾರಿಯ ಸಾಕಾರಮೂರ್ತಿಯಾಗಿ ನಿಂತರು,” ಎಂದು ಗರ್ಗಾಶ್ ಹೇಳಿದ್ದಾರೆ.


ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ವಿಡಿಯೊ ಸಂಭಾಷಣೆಯಲ್ಲಿ ಮಚ್ಚಾರ್ ಅವರು ದಾಳಿಯ ವೇಳೆ ಎದುರಿಸಿದ ಬಿಕ್ಕಟ್ಟಿನ ಕ್ಷಣಗಳನ್ನು ವಿವರಿಸಿದ್ದರು.


“ನಾನು ನೆಲದ ಮೇಲೆ ಬಿದ್ದಿದ್ದಾಗ ವಿಮಾನ ಕೆಳಮುಖವಾಗಿ ಚಲಿಸುತ್ತಿರುವುದು ನನಗೆ ಅರಿವಾಯಿತು. ಆಗ ಇದು ಕೊನೆಯ ಪ್ರಯತ್ನ, ಸ್ಮಿತ್, ಇದನ್ನು ಮಾಡಲೇಬೇಕು ಎಂದು ನನಗೆ ಅನ್ನಿಸಿತು. ಕಾಕ್‌ಪಿಟ್ ಬಾಗಿಲು ಇಲ್ಲೇ ಹತ್ತಿರದಲ್ಲಿದೆ ಎಂದುಕೊಂಡೆ,” ಎಂದು ಮಚ್ಚಾರ್ ಮೋದಿ ಅವರಿಗೆ ತಿಳಿಸಿದ್ದರು.
“ನನ್ನ ಮೇಲೆ ಹಲ್ಲೆ ನಡೆಯುತ್ತಿದ್ದರೂ ಹೇಗೋ ಆ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದೆ. ಬಳಿಕ ಇತರರು ಅಲ್ಲಿಗೆ ಬಂದರು. ಈ ಘಟನೆಯಲ್ಲಿ ಇತರರೂ ಸಮಾನ ಪಾತ್ರ ವಹಿಸಿದ್ದಾರೆ,” ಎಂದು ಅವರು ಹೇಳಿದ್ದಾರೆ.

- Advertisement -

Related news

error: Content is protected !!