Friday, July 24, 2026
spot_imgspot_img
spot_imgspot_img

ಅಂದು ನೆನಪುಗಳ ನದಿ, ಇಂದು ನಿಜಗಳ ಕಡಲು – 🖊️ರಾಧಾಕೃಷ್ಣ ಎರುಂಬು

- Advertisement -
- Advertisement -

ಮಾನವನ ಜೀವನವೇ ಒಂದು ಪ್ರಯಾಣ. ಆ ಪ್ರಯಾಣದಲ್ಲಿ “ಅಂದು” ಎಂಬುದು ಮುದ್ದಾದ ನೆನಪುಗಳ ತಂಗುದಾಣವಾಗಿದ್ದರೆ, “ಇಂದು” ಎಂಬುದು ಜವಾಬ್ದಾರಿಗಳ ನಿಲ್ದಾಣವಾಗಿದೆ. ಅಂದು ಗುಣ ಮುಖ್ಯವಾಗಿದ್ದಿತು. ಆದರೆ ಇಂದು ಕಪಟಿಯಾಗಿದ್ದರೂ ಗುಣವಂತ ಎಂದು ಹೇಳಿಸಿಕೊಳ್ಳುವ ಸಾಮರ್ಥ್ಯವಂತನಾಗಿದ್ದರೆ ಸಾಕು. ನಾವು ಬಾಲ್ಯದಲ್ಲಿ ಸಣ್ಣವರಾಗಿದ್ದರೂ ನಮ್ಮ ಮನಸ್ಸು ದೊಡ್ಡದಾಗಿತ್ತು. ಕನಸುಗಳೇ ನಮ್ಮ ಲೋಕ. ಪ್ರತಿಯೊಂದು ದಿನವೂ ಹೊಸ ಆಶೆ, ಹೊಸ ಉತ್ಸಾಹ, ಹೊಸ ನಿರೀಕ್ಷೆಗಳೊಂದಿಗೆ ಉದಯಿಸುತ್ತಿತ್ತು. ಅಂದು ನಮ್ಮ ಹೃದಯದಲ್ಲಿ ಕೋಪಕ್ಕಿಂತ ಕರುಣೆ ಹೆಚ್ಚು, ಅಹಂಕಾರಕ್ಕಿಂತ ಅಮಾಯಿಕತೆ ಹೆಚ್ಚು.

ಬಾಲ್ಯದಲ್ಲಿ ನಮ್ಮ ಆಸೆಗಳು ಸರಳವಾಗಿದ್ದವು. ಒಂದು ಚಿಕ್ಕ ಆಟಿಕೆ, ಒಂದು ಮಧುರ ಮಾತು, ಒಂದು ಮುದ್ದಾದ ಶ್ಲಾಘನೆ — ಇವುಗಳೇ ನಮ್ಮ ಸಂತೋಷದ ಕಾರಣ. ಅಂದು ಪ್ರಶ್ನೆಗಳಿದ್ದವು, ಆದರೆ ಅವುಗಳ ಉತ್ತರಗಳ ಹುಡುಕಾಟದಲ್ಲೇ ಉಲ್ಲಾಸವಿತ್ತು. ತಪ್ಪುಗಳಿದ್ದರೂ ಭಯವಿರಲಿಲ್ಲ. ಏಕೆಂದರೆ ಅಂದು ನಮ್ಮ ಬಳಿ ಇದ್ದದ್ದು ನಂಬಿಕೆಯೇ ಹೊರತು ನಿಭಾರವಲ್ಲ. ಆದರೆ ದಿನಗಳು ಉರುಳುತ್ತಾ ಹೋದಂತೆ ಜೀವನದ ಅರ್ಥ ಬದಲಾಗುತ್ತದೆ. ಇಂದು ನಾವು ದೊಡ್ಡವರಾಗಿದ್ದೇವೆ, ಆದರೆ ಮನಸ್ಸು ಕೆಲವೊಮ್ಮೆ ಸಣ್ಣದಾಗಿದೆ. ಹೊಣೆಗಾರಿಕೆಗಳು, ನಿರೀಕ್ಷೆಗಳು, ಸ್ಪರ್ಧೆಗಳು — ಇವುಗಳ ನಡುವೆ ಆಶಾವಾದವು ಕೆಲವೊಮ್ಮೆ ಕಸ ಹಿಡಿದ ಪೊರಕೆಯಂತೆ ಕಾಣುತ್ತದೆ. ಕನಸುಗಳ ಜಾಗದಲ್ಲಿ ಲೆಕ್ಕಾಚಾರಗಳು, ಮುದ್ದಾದ ನೆನಪುಗಳ ಜಾಗದಲ್ಲಿ ಗಂಭೀರ ನಿಜಗಳು ನಿಂತಿವೆ.

ಅದೇ ನೆಲ, ಅದೇ ಆಕಾಶ — ಆದರೆ ನೋಡುವ ದೃಷ್ಟಿಕೋನ ಬದಲಾಗಿದೆ. ಅಂದು ಕಂಡ ಜಗತ್ತು ಬಣ್ಣಗಳಿಂದ ತುಂಬಿದ್ದರೆ, ಇಂದು ಅದು ಕೆಲವೊಮ್ಮೆ ಕಪ್ಪು-ಬಿಳುಪಾಗಿ ಕಾಣುತ್ತದೆ. ಬದಲಾಗಿರುವುದು ಸೌಧಗಳು, ಪರಿಸ್ಥಿತಿಗಳು ಮಾತ್ರವಲ್ಲ; ನಮ್ಮ ಮನೋಭಾವವೂ ಬದಲಾಗಿದೆ. ಆದರೆ ಹಾರೈಕೆಗಳು, ಆ ಕನಸುಗಳ ಮೂಲ ಸ್ವಭಾವ, ಇನ್ನೂ ಅಂತರಾಳದಲ್ಲಿ ಜೀವಂತವಾಗಿವೆ. ಒಮ್ಮೆ ಯೋಚಿಸಿದರೆ, ನಾವು ಕಳೆದುಕೊಂಡದ್ದಕ್ಕಿಂತ ಪಡೆದದ್ದೇ ಹೆಚ್ಚು. ಅನುಭವ, ಜ್ಞಾನ, ಪಾಠಗಳು — ಇವುಗಳು ಜೀವನದ ನಿಜವಾದ ಸಂಪತ್ತು. ಆದರೂ ಮನಸ್ಸು ಕೆಲವೊಮ್ಮೆ ಅಂದಿನ ಹೊಳಪನ್ನು ಹುಡುಕುತ್ತದೆ. ಬಾಲ್ಯದ ಹೆಜ್ಜೆಗುರುತುಗಳನ್ನು ನೆನಪಿಸಿಕೊಳ್ಳುತ್ತದೆ. ಅಂದು ಮುಗಿದಿರಬಹುದು, ಆದರೆ ಅದು ನಮ್ಮ ವ್ಯಕ್ತಿತ್ವದ ನೆಲೆಯಾಗಿದೆ.

“ಅಂದು” ಒಂದು ಸ್ಮರಣೆ, “ಇಂದು” ಒಂದು ಅವಕಾಶ. ಕಳೆದ ಕಾಲವನ್ನು ಕೇವಲ ನೆನಪಾಗಿ ಉಳಿಸಿಕೊಳ್ಳದೆ, ಅದರ ಸೌಂದರ್ಯವನ್ನು ಇಂದಿನ ಬದುಕಿನಲ್ಲಿ ಬೆರೆಸಿಕೊಳ್ಳಬೇಕು. ಅಂದಿನ ಅಮಾಯಿಕತೆಯನ್ನು, ನಂಬಿಕೆಯನ್ನು, ಹರ್ಷವನ್ನು ಇಂದಿನ ಜವಾಬ್ದಾರಿಗಳೊಂದಿಗೆ ಹೊಂದಿಸಿಕೊಳ್ಳುವಾಗಲೇ ಜೀವನ ಸಂಪೂರ್ಣವಾಗುತ್ತದೆ.ಆದುದರಿಂದ ಮನವೇ, “ಅಂದು” ಮುಗಿದರೂ ಅದರ ಮೌಲ್ಯ ಉಳಿದಿದೆ. “ಇಂದು” ಅಲ್ಪವೆಂದು ಭಾವಿಸದೆ, ಅದನ್ನೇ ಅಮೂಲ್ಯವನ್ನಾಗಿ ಮಾಡೋಣ. ಏಕೆಂದರೆ ನಾಳೆಯ “ಅಂದು” ಇದೇ “ಇಂದು” ಆಗಿರುತ್ತದೆ.

- 🖊️ರಾಧಾಕೃಷ್ಣ ಎರುಂಬು

- Advertisement -

Related news

error: Content is protected !!