



ಅಫಜಲಪುರ: ಭೀಮಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಮೃತರನ್ನು ತಾಲೂಕಿನ ಮಣ್ಣೂರ ಗ್ರಾಮದ ಪುಂಡಲೀಕ ಮುಲಿಮನಿ (17) ಮತ್ತು ಮಹೇಶ್ ಹಿರೇಗೌರ (16) ಎಂದು ಗುರುತಿಸಲಾಗಿದೆ.
ಗ್ರಾಮದ ಶ್ರೀ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಗೌರ(ಕೆ) ಗ್ರಾಮಸ್ಥರು ಹರಿಕೆ ತೀರಿಸಲು ನೈವೇದ್ಯ ಮಾಡಿದ್ದ ಹಿನ್ನೆಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಊಟಕ್ಕೆ ತೆರಳಿದ್ದರು. ಆದರೆ, ಅಲ್ಲಿ ಅಡುಗೆ ಇನ್ನೂ ಆರಂಭವಾಗಿಲ್ಲವೆಂದು ತಿಳಿದು, ಅಡುಗೆ ಆಗುವವರೆಗೆ ಈಜಾಡೋಣ ಎಂದು ಹೇಳಿ ಭೀಮಾ ನದಿಗೆ ಇಳಿದಿದ್ದಾರೆ. ಈ ವೇಳೆ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಿದ್ದರಿಂದ ಈಜಲು ಸಾಧ್ಯವಾಗದೆ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ ಎಂದು ತಿಳಿದು ಬಂದಿದೆ.
ಇಬ್ಬರು ವಿದ್ಯಾರ್ಥಿಗಳು ಕಾಣೆಯಾಗಿರುವುದನ್ನು ಗಮನಿಸಿದ ಪಾಲಕರು ಪರಿಚಿತರ ಮನೆಗಳಿಗೆ ತೆರಳಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಶನಿವಾರ ಬೆಳಿಗ್ಗೆ ಸುಮಾರು 9:30 ಗಂಟೆಗೆ ಸ್ಥಳೀಯರು ನದಿಯಲ್ಲಿ ಮೃತದೇಹಗಳು ತೇಲಿಕೊಂಡು ಬರುತ್ತಿರುವುದನ್ನು ಗಮನಿಸಿ ಹೊರತೆಗೆದಿದ್ದಾರೆ ಎಂದು ತಿಳಿದು ಬಂದಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದ್ದು, ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








