





ಬೆಂಗಳೂರು : ರಾಜ್ಯ ಸರಕಾರವು 2026-27ನೇ ಸಾಲಿನ ಶಾಲಾ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮೇ 29ರಿಂದ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ತರಗತಿಗಳು ಆರಂಭಗೊಳ್ಳಲಿವೆ.
ಶಾಲೆಗಳ ಮೊದಲ ಅವಧಿ ಮೇ 29 ರಿಂದ ಅ.2 ರವರೆಗೆ ಮತ್ತು ಎರಡನೇ ಅವಧಿ ಅ.22 ರಿಂದ 2027ರ ಎ.10ರವರೆಗೆ ನಡೆಯಲಿದೆ. ಅ.3 ರಿಂದ ಅ.21ರವರೆಗೆ ದಸರಾ ರಜೆ ಇರಲಿದೆ. ಹೀಗಾಗಿ ಮಕ್ಕಳ ದಾಖಲಾತಿ ಪ್ರಕ್ರಿಯೆಯನ್ನು ಜೂ.30ರ ಒಳಗೆ ಪೂರ್ಣಗೊಳಿಸಬೇಕು, ಶಾಲೆ ಬಿಟ್ಟಿರುವ 6 ವರ್ಷದಿಂದ 18 ವರ್ಷದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ದಾಖಲಾತಿ ಜಾಗೃತಿ ಅಭಿಯಾನವನ್ನು ನಡೆಸಬೇಕು ಎಂದು ಸರಕಾರ ತಿಳಿಸಿದೆ.
ಶೈಕ್ಷಣಿಕ ವರ್ಷದ ಒಟ್ಟು 365 ದಿನಗಳಲ್ಲಿ 119 ರಜಾ ದಿನಗಳಿರಲಿದ್ದು, 245 ಕರ್ತವ್ಯದ ದಿನಗಳೆಂದು ಪರಿಗಣಿಸಲಾಗಿದ್ದು, ಈ ದಿನಗಳಲ್ಲಿ ಪರೀಕ್ಷೆಗಳು ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ 26 ದಿನಗಳು, ಪಠ್ಯೇತರ ಚಟುವಟಿಕೆಗಳ ನಿರ್ವಹಣೆಗಾಗಿ 24 ದಿನಗಳು, ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನಗಳು, ಶಾಲಾ ಸ್ಥಳೀಯ ರಜೆ 4 ದಿನಗಳು ಮತ್ತು ಕಲಿಕಾ ಪ್ರಕ್ರಿಯೆಗೆ 181 ದಿನಗಳನ್ನು ಮೀಸಲಿಡಲಾಗಿದೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.








