

ಪುತ್ತೂರು: ಅಪ್ರಾಪ್ತ ವಯಸ್ಕ ಬಾಲಕಿಯನ್ನು ಗರ್ಭವತಿಗೊಳಿಸಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ಸಾಲ್ಮರ ನಿವಾಸಿ ತರುಣ್ಗೆ ಮಂಗಳೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.


ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನ ಪ್ರಕಾರ, ಅನಂತಾಡಿಯ ಮಹಿಳೆಯೊಬ್ಬರ ಮಗಳು 7ನೇ ತರಗತಿ ತನಕ ವಿದ್ಯಾಭ್ಯಾಸ ಮಾಡಿ ಬಳಿಕ ಶಾಲೆ ಬಿಟ್ಟಿದ್ದಳು. ಕಳೆದ ಎರಡು ವರ್ಷಗಳಿಂದ ಆಕೆಗೆ ಸಾಲ್ಮರ ಮೂಲದ ತರುಣ್ ಪರಿಚಯವಾಗಿದ್ದು, ಆತ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ತೋಟದ ಕೆಲಸ ಮಾಡುತ್ತಿದ್ದನು.

2025ರ ಮಾರ್ಚ್ ತಿಂಗಳಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಬಾಲಕಿ ಮೂಡಿಗೆರೆಗೆ ತೆರಳಿದ್ದಳು. ಬಳಿಕ ತಾಯಿಯೊಂದಿಗೆ ಫೋನ್ ಮೂಲಕ ಸಂಪರ್ಕದಲ್ಲಿದ್ದಳು. ಇದೇ ವೇಳೆ ತಾನು 7 ತಿಂಗಳ ಗರ್ಭಿಣಿಯಾಗಿರುವುದಾಗಿ ತಾಯಿಗೆ ಮಾಹಿತಿ ನೀಡಿದ್ದಳು. ಮಗಳಿಗೆ 19 ವರ್ಷ ಪ್ರಾಯವಾಗಿದೆ ಎಂದು ಭಾವಿಸಿದ್ದ ತಾಯಿ, ಇಬ್ಬರಿಗೂ ಮುಂದಿನಲ್ಲಿ ಮದುವೆ ಮಾಡುವ ಆಲೋಚನೆಯಲ್ಲಿದ್ದುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಾರ್ಚ್ 14ರಂದು ವೈದ್ಯಕೀಯ ತಪಾಸಣೆಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ, ದಾಖಲೆಗಳಲ್ಲಿ ಜನ್ಮ ದಿನಾಂಕದ ಗೊಂದಲ ಬೆಳಕಿಗೆ ಬಂದಿದೆ. ಆರಂಭದಲ್ಲಿ ಆಧಾರ್ ಕಾರ್ಡ್ನಲ್ಲಿ 06.07.2009 ಎಂದು ದಾಖಲಾಗಿದ್ದ ಜನ್ಮ ದಿನಾಂಕದ ಬಗ್ಗೆ ಮಾಹಿತಿ ದೊರಕಿದ್ದರೂ, ಬಳಿಕ ಶಾಲಾ ದಾಖಲಾತಿ ಪರಿಶೀಲಿಸಿದಾಗ ಬಾಲಕಿಯ ನಿಜವಾದ ಜನ್ಮ ದಿನಾಂಕ 06.07.2010 ಎಂದು ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಬಾಲಕಿ ಅಪ್ರಾಪ್ತ ವಯಸ್ಕಳಾಗಿರುವುದು ದೃಢಪಟ್ಟಿದ್ದು, ಆಕೆಯೊಂದಿಗೆ ದೈಹಿಕ ಸಂಪರ್ಕ ಹೊಂದಿದ ಆರೋಪದಡಿ ತರುಣ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.








