




ಮಂಗಳೂರು, ಎ.8: ರಾಜ್ಯದ ವಿವಿಧ ಆಟೋಗ್ಯಾಸ್ ಬಂಕ್‌ಗಳಲ್ಲಿ ಅನಿಲದ ದಾಸ್ತಾನು ಕೊರತೆಯಿದೆ ಎಂಬ ತಪ್ಪು ಮಾಹಿತಿಯ ಆಧಾರದ ಮೇಲೆ ಕೆಲವು ದಿನಗಳಿಂದ ಆಟೋ ಮಾಲಕರು ಮತ್ತು ಚಾಲಕರು ಬಂಕ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಈ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಕಟ ವಾಗಿರುವ ವರದಿಗಳು ಕೇವಲ ವದಂತಿಗಳಾಗಿದೆ. ಹಾಗಾಗಿ ಸಾರ್ವಜನಿಕರು ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸ್ಪಷ್ಟಪಡಿಸಿದೆ.
ಕೆಲವು ಖಾಸಗಿ ಆಟೋ ಗ್ಯಾಸ್ ಸರಬರಾಜು ಸಂಸ್ಥೆಗಳಲ್ಲಿ ಮಾತ್ರ ಅಲ್ಪಮಟ್ಟಿನ ಕೊರತೆ ಕಂಡುಬಂದಿದೆ. ಇದನ್ನು ಸರಿಪಡಿಸಲು ಸರಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಮೂಲಕ ಹೆಚ್ಚಿನ ಪ್ರಮಾಣದ ಅನಿಲವನ್ನು ಪೂರೈಕೆ ಮಾಡಲಾಗುತ್ತಿದೆ.ಈ ಮೂರು ಸಂಸ್ಥೆಗಳು ಸರಾಸರಿ 56.67 ಮೆಟ್ರಿಕ್ ಟನ್ ಆಟೋಗ್ಯಾಸ್ ಸರಬರಾಜು ಮಾಡುತ್ತಿದ್ದವು. ಪ್ರಸಕ್ತ ಬೇಡಿಕೆಯನ್ನು ಪೂರೈಸಲು ಸರಬರಾಜು ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಅಂದರೆ ಸದ್ಯ ಪ್ರತಿದಿನ ಸರಾಸರಿ 83.58 ಮೆಟ್ರಿಕ್ ಟನ್ ಗ್ಯಾಸ್ ಚಿಲ್ಲರೆ ಮಾರಾಟ ಮಳಿಗೆಗಳಿಗೆ ಪೂರೈಸಲಾಗುತ್ತಿದೆ.
ಕಳೆದ ಐದು ದಿನಗಳ ಪೂರೈಕೆ ವಿವರ:
ಎ.2ರಿಂದ 6ರವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ ಪೂರೈಕೆಯಲ್ಲಿ ಸ್ಥಿರತೆ ಇರುವುದು ಕಂಡು ಬಂದಿದೆ. ಎ.2ರಂದು 87.78 ಮೆಟ್ರಿಕ್ ಟನ್, ಎ.3ರಂದು 86.05 ಮೆಟ್ರಿಕ್ ಟನ್, ಎ.4ರಂದು 84.80 ಮೆಟ್ರಿಕ್ ಟನ್, ಎ.5ರಂದು ಗರಿಷ್ಟ 94.11 ಮೆಟ್ರಿಕ್ ಟನ್ ಹಾಗೂ ಎ.6ರಂದು 83.58 ಮೆಟ್ರಿಕ್ ಟನ್ ಅನಿಲವನ್ನು ಈ ಮೂರು ಪ್ರಮುಖ ಸಂಸ್ಥೆಗಳು ಯಶಸ್ವಿಯಾಗಿ ಪೂರೈಕೆ ಮಾಡಿವೆ. ಆದ್ದರಿಂದ ರಾಜ್ಯದ ಆಟೋ ಮಾಲಕರು ಮತ್ತು ಚಾಲಕರು ಇಂತಹ ಯಾವುದೇ ಸುಳ್ಳು ವದಂತಿಗಳನ್ನು ನಂಬಬಾರದು ಮತ್ತು ಆತಂಕಕ್ಕೊಳಗಾಗಿ ಬಂಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲಬಾರದು.
ಅನಿಲ ಪೂರೈಕೆ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಪ್ರಕಟನೆಯಲ್ಲಿ ತಿಳಿಸಿದೆ.







