Tuesday, July 28, 2026
spot_imgspot_img
spot_imgspot_img

ಬೆಂಗಳೂರು: ಲಾರಿ-ಕಾರು ಡಿಕ್ಕಿ – ಗುದ್ದಿದ ರಭಸಕ್ಕೆ ಗುಜರಿ ಗೋಡೌನ್ ಬೆಂಕಿಗಾಹುತಿ, ವ್ಯಕ್ತಿ ಸಾವು

- Advertisement -
- Advertisement -

ಬೆಂಗಳೂರು: ಇಳಿಜಾರಿನಲ್ಲಿ ಕಬ್ಬಿಣದ ಕಂಬಿ ಸಾಗಿಸ್ತಿದ್ದ ಲಾರಿ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಗುಜರಿ ಗೋಡೌನ್‌ಗೆ ಬೆಂಕಿ ಹೊತ್ತಿಕೊಂಡು ಸುಟ್ಟುಕರಕಲಾಗಿರುವ ಘಟನೆ ನಗರದ ಕುರುಬರಹಳ್ಳಿ ಬಳಿ ನಡೆದಿದೆ.

ಲಾರಿ ಡಿಕ್ಕಿಯಾದ ಪರಿಣಾಮ ಕಾರೊಳಗೆ ಮಲಗಿದ್ದ ಯುವಕ ಅಂಬದಾಸ್ (22) ಸಾವನ್ನಪ್ಪಿದ್ದಾನೆ. ಲಾರಿ ಚಾಲಕ ಶರ್ಮಾಗೆ ಸಣ್ಣಪುಟ್ಟು ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಆಂಧ್ರದಿಂದ ಸುಂಕದಕಟ್ಟೆಗೆ ಲಾರಿಯಲ್ಲಿ ಸ್ಟೀಲ್ ಸಾಗಿಸಲಾಗುತ್ತಿತ್ತು. ಲಾರಿ ಚಾಲಕ ರಾತ್ರಿ 1:30ರ ಸುಮಾರಿಗೆ ಗೂಗಲ್ ಮ್ಯಾಪ್ ಹಾಕಿಕೊಂಡು ಹೊರಟಿದ್ದ. ಈ ವೇಳೆ ಕುರುಬರಹಳ್ಳಿ ಮುಖಾಂತರ ದಾರಿ ತೋರಿಸಿತ್ತು. ಕುರುಬರಹಳ್ಳಿ ಬಳಿ ರಸ್ತೆ ಬಹುತೇಕವಾಗಿ ಇಳಿಜಾರಾಗಿತ್ತು. ಲಾರಿ ಓವರ್ ಲೋಡ್ ಆಗಿದ್ದರಿಂದ ಇಳಿಜಾರಿನಲ್ಲಿ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಏರ್‌ಪೋರ್ಟ್ ಪಿಕ್‌ಅಪ್‌ಗಾಗಿ ಕಾಯುತ್ತಾ ನಿಂತಿದ್ದ. ಈ ವೇಳೆ ಲಾರಿ ಗುದ್ದಿದ ರಭಸಕ್ಕೆ ಕಾರನ್ನು 50 ರಿಂದ 100 ಮೀ ದೂರಕ್ಕೆ ಎಳೆದೊಯ್ದಿದೆ. ಪರಿಣಾಮ ಕಾರಿನಲ್ಲಿ ಮಲಗಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಈ ವೇಳೆ ಲಾರಿ ಚಾಲಕ ರಾಜಕಾಲುಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ.

ಲಾರಿ ಹಾಗೆಯೇ ಮುಂದೆ ಹೋಗಿ ಸ್ಕ್ರಾಪ್ ಗೋಡೌನ್‌ಗೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!