Monday, July 27, 2026
spot_imgspot_img
spot_imgspot_img

ಬೀದರ್‌: ಪ್ರಾಚೀನ ಶಿಲಾಶಾಸನ, ಸರ್ಪರೂಪದ ಶಿಲ್ಪಗಳು ಪತ್ತೆ!!

- Advertisement -
- Advertisement -

ಬೀದರ್: ಐತಿಹಾಸಿಕ ಲಕ್ಕುಂಡಿ ಮತ್ತು ಬಳ್ಳಾರಿಯಲ್ಲಿ ನಿಧಿ ಮತ್ತು ಶಿಲಾಶಾಸನಗಳು ಪತ್ತೆಯಾಗಿ ರಾಜ್ಯದ ಗಮನ ಸೆಳೆದಿದು, ಇದೀಗ ಬೀದರ್ ಜಿಲ್ಲೆಯಲ್ಲೂ ಐತಿಹಾಸಿಕ ಪ್ರಾಚೀನ ಶಿಲಾ ಶಾಸನಗಳು ಹಾಗೂ ಸರ್ಪ ರೂಪದ ಶಿಲ್ಪಗಳು ಪತ್ತೆಯಾಗಿವೆ. 12ನೇ ಶತಮಾನದ ಚಾಲುಕ್ಯರ ಸಮಯದಲ್ಲಿ 108 ಐತಿಹಾಸಿಕ ದೇವಸ್ಥಾನಗಳು ಒಂದೇ ಕಡೆ ಇದ್ದವು ಎಂಬ ಪ್ರತೀತಿ ಇದೆ. ಹೀಗಾಗಿ ಸಂಶೋಧನೆ ಮಾಡುವಂತೆ ಸರ್ಕಾರಕ್ಕೆ ಗ್ರಾಮಸ್ಥರು ಆಗ್ರಹ ಮಾಡುತ್ತಿದ್ದಾರೆ.

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶಕ್ಕಾಗಿ ಅಡುಗೆ ತಯಾರಿ ನಡೆಸಲು ಭವಾನಿ ದೇವಸ್ಥಾನದ ಹಿಂಭಾಗದ ಜಾಗವನ್ನು ಸ್ವಚ್ಛಗೊಳಿಸುವಾಗ ಈ ಅಚ್ಚರಿ ಬೆಳಕಿಗೆ ಬಂದಿದೆ. ಶಿವಲಿಂಗ ಹಾಗೂ ನಾಗ ಸರ್ಪದ ವಿಗ್ರಹಗಳು, ಅಪರೂಪದ ಐದು ಹೆಡೆಯ ನಾಗಮೂರ್ತಿ, ಪ್ರಾಚೀನ ಶಿಲಾ ಶಾಸನ ಹಾಗೂ ಸರ್ಪ ರೂಪದ ಶಿಲ್ಪಗಳು ಪತ್ತೆಯಾಗಿದೆ ಎನ್ನಲಾಗಿದೆ.

ಗ್ರಾಮಸ್ಥರ ಪ್ರಕಾರ ಇಲ್ಲಿ ಸುಮಾರು 108 ದೇವಸ್ಥಾನಗಳಿದ್ದವು ಎಂಬ ಪ್ರತೀತಿ ಇದೆ. ಇದಕ್ಕೆ ಪೂರಕವೆಂಬಂತೆ 7-8 ವರ್ಷಗಳ ಹಿಂದೆ ವಿಷ್ಣು ಹಾಗೂ ಕಾಳಿಕಾ ಮಾತಾ ವಿಗ್ರಹಗಳು ಪತ್ತೆಯಾಗಿದ್ದವು. ಈಗಲೂ ಜನರು ಹೊಸ ಮನೆ ಕಟ್ಟಲು ಅಥವಾ ಜಾಗ ಅಗೆಯಲು ಹೋದರೆ ಸಾಕಷ್ಟು ಶಿಲ್ಪಕಲೆಗಳು ಪತ್ತೆ ಆಗುತ್ತಿವೆ. ಗ್ರಾಮದಲ್ಲಿ ಕಾಲಕಾಲಕ್ಕೆ ಇಂತಹ ದೈವಿಕ ಕುರುಹುಗಳು ಸಿಗುತ್ತಲೇ ಇವೆ. ಇದು ಕೇವಲ ಕಲ್ಲುಗಳಲ್ಲ, ನಮ್ಮ ಪೂರ್ವಜರ ಸಂಸ್ಕೃತಿಯ ಪ್ರತೀಕ. ಸರ್ಕಾರ ಮತ್ತು ಪುರಾತತ್ವ ಇಲಾಖೆ ತಕ್ಷಣ ಇಲ್ಲಿ ವೈಜ್ಞಾನಿಕವಾಗಿ ಸಂಶೋಧನೆ ನಡೆಸಬೇಕು. ಆಗ ಮಾತ್ರ ಈ ಮಣ್ಣಿನ ನಿಜವಾದ ಇತಿಹಾಸ ಹೊರಬರಲು ಸಾಧ್ಯ. ನಾರಾಯಣಪುರ ಗ್ರಾಮದಲ್ಲಿ ಸಂಶೋಧನೆ ಅಗತ್ಯ ಎಂದು ಗ್ರಾಮಸ್ಥರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

ನಾರಾಯಣಪುರ ಗ್ರಾಮದಲ್ಲಿ ಪತ್ತೆಯಾಗಿರುವ ಈ ಶಿಲಾಶಾಸನಗಳು ಮತ್ತು ಮೂರ್ತಿಗಳು 12ನೇ ಶತಮಾನಕ್ಕೆ ಸೇರಿವೆ ಎಂದು ಹೇಳಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಪುರಾತತ್ವ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡುತ್ತಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!