Thursday, July 23, 2026
spot_imgspot_img
spot_imgspot_img

30 ವರ್ಷ ಅನುಭವವಿರುವ ಶಿಕ್ಷಕಿಯ ವಿರುದ್ಧ ಶಾಸಕರ ದುವರ್ತನೆ ಖಂಡನೀಯ – ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

- Advertisement -
- Advertisement -

ಪುತ್ತೂರು: ಮೂರು ದಶಕಗಳ ಸೇವಾ ಅನುಭವ ಹೊಂದಿರುವ ಶಿಕ್ಷಕಿಯ ವಿರುದ್ಧ ಪುತ್ತೂರು ಶಾಸಕರು ತೋರಿರುವ ದುವರ್ತನೆ ಖಂಡನೀಯವಾಗಿದ್ದು, ಜನರಿಂದ ಆಯ್ಕೆಯಾದ ಪ್ರತಿನಿಧಿಯಾಗಿ ಅವರ ವರ್ತನೆ ಶೋಭಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಶಾಸಕರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.


ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಸುಸಂಸ್ಕೃತ ಕುಟುಂಬದಿಂದ ಬಂದಿರುವ ಶಾಸಕರ ಮಾತುಗಳು ಮತ್ತು ನಡವಳಿಕೆಗಳು ಇತ್ತೀಚಿನ ದಿನಗಳಲ್ಲಿ ಅತಿರೇಕಕ್ಕೆ ಹೋಗುತ್ತಿವೆ. ಅವರ ಮಾತುಗಳನ್ನು ನೋಡಿದರೆ ತಾವು ಜನರಿಂದ ಆಯ್ಕೆಯಾದ ಶಾಸಕರಾಗಿದ್ದಾರೆ ಎಂಬುದನ್ನೇ ಮರೆತಂತಾಗಿದೆ ಎಂದರು.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕ್ಷೇತ್ರದಲ್ಲಿ ಇದ್ದ ಗೂಂಡಾ ಸಂಸ್ಕೃತಿಯನ್ನು ಪುನಃ ಸ್ಥಾಪಿಸಲು ಹೊರಟಂತೆ ಶಾಸಕರ ವರ್ತನೆ ಕಾಣಿಸುತ್ತಿದೆ. ಬಡಗನ್ನೂರು ಪಂಚಾಯತ್ ವ್ಯಾಪ್ತಿಯ ಕೊಯಿಲ ಶಾಲೆಯ ಕಾರ್ಯಕ್ರಮದಲ್ಲಿ ತಮಗೆ ಅವಮಾನವಾಗಿದೆ ಎಂಬ ಸುಳ್ಳು ಆರೋಪ ಮಾಡುತ್ತಾ, ಅಲ್ಲಿನ ಶಿಕ್ಷಕಿಯೊಬ್ಬರಿಗೆ ಕಾಂಗ್ರೆಸ್ ನಾಯಕರ ಎದುರಲ್ಲೇ ಅವಾಚ್ಯವಾಗಿ ಮಾತನಾಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದರು.
ಒಂದು ಕಡೆ ವೇದಿಕೆಯಲ್ಲಿ ಮಹಿಳೆಯರನ್ನು ದೇವರಂತೆ ಹೊಗಳುವ ಶಾಸಕರು, ಮತ್ತೊಂದು ಕಡೆ ಮಹಿಳೆಯರನ್ನೇ ಅವಮಾನಿಸುವುದು ದ್ವಂದ್ವ ನಿಲುವಿನ ಪ್ರತಿಬಿಂಬವಾಗಿದೆ. ಮಹಿಳೆಯರ ಮೇಲಿನ ಗೌರವ ಕೇವಲ ಭಾಷಣಗಳಿಗೆ ಸೀಮಿತವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದರು. ಈ ಕುರಿತು ಮುಂದಿನ ದಿನಗಳಲ್ಲಿ ಸಜ್ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದೂ ಅವರು ಎಚ್ಚರಿಸಿದರು.
ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ ಮಾತನಾಡಿ, ಕಳೆದ ಎರಡೂವರೆ ವರ್ಷಗಳಲ್ಲಿ ಶಾಸಕರ ವರ್ತನೆ ಪುತ್ತೂರನ್ನು ಗೂಂಡಾರಾಜ್ಯವನ್ನಾಗಿ ಮಾಡಲು ಹೊರಟಿರುವಂತೆ ಕಾಣುತ್ತಿದೆ. ಇಂತಹ ನಡವಳಿಕೆಗೆ ವಿರುದ್ಧವಾಗಿ ಬಿಜೆಪಿ ಸೂಕ್ತ ಹೋರಾಟ ನಡೆಸಲಿದೆ ಎಂದರು.
ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಮಾತನಾಡಿ, ಶಾಲೆಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಯಾವುದೇ ಗಣ್ಯರ ಹೆಸರನ್ನು ಉಲ್ಲೇಖಿಸಿರಲಿಲ್ಲ. ಕಾರ್ಯಕ್ರಮಕ್ಕೆ ಹಾಜರಾದವರಲ್ಲಿಯೇ ಉದ್ಘಾಟನೆ ನಡೆಯಿತು. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಶಾಸಕರು ಶಿಕ್ಷಕಿಯ ವಿರುದ್ಧ ಮಾತನಾಡಿರುವುದು ಅಸಂಬದ್ಧವಾಗಿದೆ. ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷರು ಹಾಗೂ ನಾವಿಬ್ಬರೂ ಇದ್ದರೂ ಶಾಸಕರ ವಿರುದ್ಧ ಯಾರೂ ಮಾತನಾಡಿಲ್ಲ. ಘಟನೆ ನಡೆದೇ ಇಲ್ಲದಿದ್ದರೂ ನಡೆದಿದೆ ಎಂದು ಬಿಂಬಿಸುವುದು ಅತ್ಯಂತ ಬೇಸರದ ಸಂಗತಿ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ, ಪ್ರಮುಖರಾದ ಹರಿಪ್ರಸಾದ್ ಯಾದವ್, ನಿತೀಶ್ ಕುಮಾರ್ ಶಾಂತಿವನ, ವಿದ್ಯಾಧರ್ ಜೈನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

- Advertisement -

Related news

error: Content is protected !!