Monday, September 14, 2026
spot_imgspot_img
spot_imgspot_img

ಗಣೇಶ ಚತುರ್ಥಿ: ಮಣ್ಣಿನ ಮೂರ್ತಿಯಲ್ಲಿ ಮನಸ್ಸಿನ ಹುಡುಕಾಟ

- Advertisement -
- Advertisement -

ಮನೆಯ ಅಂಗಳದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವಾಗ ನಮ್ಮೊಳಗೆ ಸಂಭ್ರಮ. ಬಾಗಿಲಿಗೆ ತೋರಣ, ಅಂಗಳಕ್ಕೆ ರಂಗೋಲಿ, ಹೂವಿನ ಘಮ, ಗರಿಕೆಯ ಹಸಿರು, ಮೋದಕದ ಸಿಹಿ, ಆರತಿಯ ಬೆಳಕು ಎಲ್ಲವೂ ಸೇರಿ ಮನೆಗೆ ಒಂದು ಪುಟ್ಟ ಬ್ರಹ್ಮಾಂಡವೇ ಇಳಿದಂತೆ ಭಾಸವಾಗುತ್ತದೆ. ಕೆಲ ದಿನಗಳ ಕಾಲ ಆ ಮಣ್ಣಿನ ಮೂರ್ತಿಯ ಮುಂದೆ ನಮ್ಮ ಬೇಡಿಕೆಗಳಿರುತ್ತವೆ, ಪ್ರಾರ್ಥನೆಗಳಿರುತ್ತವೆ, ಕೃತಜ್ಞತೆಗಳಿರುತ್ತವೆ. ಆದರೆ ಒಂದು ದಿನ ಅವನನ್ನೇ ನಾವು ಹೊತ್ತುಕೊಂಡು ಹೊರಡುತ್ತೇವೆ. ಮೆರವಣಿಗೆಯ ಸದ್ದು ನಿಧಾನವಾಗಿ ದೂರವಾಗುತ್ತದೆ. ಕೊನೆಗೆ ನೀರು ಅವನ ರೂಪವನ್ನು ತನ್ನೊಳಗೆ ಕರಗಿಸಿಕೊಳ್ಳುತ್ತದೆ.

ಹೌದು… ಕರೆತಂದ ದೇವರನ್ನು ಮತ್ತೆ ಯಾಕೆ ಕಳುಹಿಸುತ್ತೇವೆ? ಒಂದು ಕ್ಷಣ ಯೋಚಿಸೋಣ…

ದೇವರನ್ನು ಕಳುಹಿಸುವುದಕ್ಕಾಗಿಯೇ ಕರೆತರುತ್ತೇವೆಯೇ ಅಥವಾ ಕಳುಹಿಸುವುದನ್ನು ಕಲಿಯುವುದಕ್ಕಾಗಿಯೇ ಕರೆತರುತ್ತೇವೆಯೇ? ಬಹುಶಃ ಗಣೇಶ ಚತುರ್ಥಿಯ ತತ್ತ್ವ ಇಲ್ಲಿಯೇ ಅಡಗಿದೆ.

ಮಣ್ಣಿನಿಂದ ರೂಪ ಪಡೆದದ್ದು ಮತ್ತೆ ಮಣ್ಣಿಗೆ ಸೇರುತ್ತದೆ. ಇದು ಗಣೇಶನ ಕಥೆಯಷ್ಟೇ ಅಲ್ಲ; ಸಕಲ ಸೃಷ್ಟಿಯ ಕಥೆ. ಹುಟ್ಟಿದ ಪ್ರತಿಯೊಂದು ರೂಪವೂ ಒಂದು ದಿನ ತನ್ನ ಮೂಲಕ್ಕೆ ಮರಳುತ್ತದೆ. ಹೂವು ಅರಳುತ್ತದೆ, ಬಾಡುತ್ತದೆ. ನದಿ ಹರಿಯುತ್ತದೆ, ಸಮುದ್ರ ಸೇರುತ್ತದೆ. ಬೆಳಕು ಹೊಳೆಯುತ್ತದೆ, ಸಂಜೆಯಲ್ಲಿ ಕತ್ತಲೆಯೊಳಗೆ ಕರಗುತ್ತದೆ. ಮನುಷ್ಯ ಬರುತ್ತಾನೆ, ತನ್ನ ಹೆಸರನ್ನು ಜಗತ್ತಿನಲ್ಲಿ ಬರೆಯುತ್ತಾನೆ, ಕೊನೆಗೆ ಹೆಸರಿಗಿಂತ ದೊಡ್ಡ ಮೌನದೊಳಗೆ ಲೀನವಾಗುತ್ತಾನೆ.

ಹಾಗಾದರೆ, ವಿಸರ್ಜನೆ ನಾಶವೇ..? ಅಲ್ಲ. ಅದು ರೂಪದ ಅಂತ್ಯವಷ್ಟೇ; ಅರ್ಥದ ಅಂತ್ಯವಲ್ಲ.

ಗಣೇಶನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವಾಗ ನಾವು ಒಂದು ಮಹತ್ವದ ಸತ್ಯವನ್ನು ಅರಿಯಬೇಕಿದೆ: ‘ನಮಗೆ ಸೇರಿದ ಯಾವುದೂ ಶಾಶ್ವತವಾಗಿ ನಮ್ಮದಾಗಿರುವುದಿಲ್ಲ.’ ಈ ಸತ್ಯವನ್ನು ಒಪ್ಪಿಕೊಳ್ಳುವುದು ಮನುಷ್ಯನಿಗೆ ಅತ್ಯಂತ ಕಷ್ಟ. ನಾವು ವಸ್ತುಗಳನ್ನು ಕೂಡಿಡುತ್ತೇವೆ, ಸಂಬಂಧಗಳನ್ನು ಬೆಸೆಯುತ್ತೇವೆ, ನೆನಪುಗಳನ್ನು ಬಿಗಿಯಾಗಿ ಅಪ್ಪಿಕೊಳ್ಳುತ್ತೇವೆ. ‘ನನ್ನದು’ ಎಂಬ ಪದದ ಸುತ್ತ ಒಂದು ಜಗತ್ತನ್ನೇ ಕಟ್ಟಿಕೊಳ್ಳುತ್ತೇವೆ. ಆದರೆ ಪ್ರಕೃತಿ ಪ್ರತಿಕ್ಷಣವೂ ‘ಬಿಡು’ ಎಂದು ಹೇಳುತ್ತಲೇ ಇರುತ್ತದೆ. ಗಣೇಶನ ವಿಸರ್ಜನೆ ಆ ‘ಬಿಡುವಿಕೆಯ’ ಒಂದು ಸಾಂಸ್ಕೃತಿಕ ಪಾಠ.

ಹಾಗಾಗಿ, ಇದು ಕೇವಲ ಒಂದು ಹಬ್ಬದ ಆಚರಣೆಯಲ್ಲ. ನಮ್ಮ ಬದುಕಿನ ಬಹುದೊಡ್ಡ ಸತ್ಯವೊಂದು ಈ ಆಚರಣೆಯೊಳಗೆ ಅಡಗಿದೆ. ಬರುವುದು ಎಲ್ಲವೂ ಹೋಗಲೇಬೇಕು. ರೂಪ ಪಡೆದದ್ದು ರೂಪ ಕಳೆದುಕೊಳ್ಳಲೇಬೇಕು. ಆದರೆ ರೂಪ ಕಳೆದುಕೊಂಡದ್ದೆಲ್ಲವೂ ನಾಶವಾಗುವುದಿಲ್ಲ. ಮಣ್ಣಿನಿಂದ ಬಂದ ಮೂರ್ತಿ ಮಣ್ಣಿಗೇ ಸೇರುತ್ತದೆ; ಆದರೆ ಅದರ ನೆನಪು, ಅದರ ಸಂಕೇತ, ಅದರ ಸಂದೇಶ ಮನಸ್ಸಿನಲ್ಲಿ ಉಳಿಯುತ್ತದೆ.

ಗಣೇಶ ಎಂದರೆ ಕೇವಲ ಆನೆಯ ಮುಖದ ದೇವರಲ್ಲ. ‘ಗಣ’ ಎಂದರೆ ಸಮೂಹ, ‘ಈಶ’ ಎಂದರೆ ಅಧಿಪತಿ. ನಮ್ಮೊಳಗಿನ ಅನೇಕ ಭಾವನೆಗಳು, ಆಸೆಗಳು, ಗೊಂದಲಗಳು, ಭಯಗಳು, ಬಯಕೆಗಳು ಇವೆಲ್ಲವೂ ಒಂದು ದೊಡ್ಡ ಗಣವೇ ಅಲ್ಲವೇ? ಆ ಗಣಕ್ಕೆ ಒಬ್ಬ ನಾಯಕ ಬೇಕು. ಹೊರಗಿನ ಜಗತ್ತನ್ನು ಗೆಲ್ಲುವುದಕ್ಕಿಂತ ಮೊದಲು ಒಳಗಿನ ಈ ಗಣವನ್ನು ನಿಯಂತ್ರಿಸುವ ಶಕ್ತಿ ಬೇಕು. ಆ ಶಕ್ತಿಯ ಸಂಕೇತ ಗಣೇಶ.

ಗಣೇಶನ ದೊಡ್ಡ ತಲೆ ಜ್ಞಾನವನ್ನು ನೆನಪಿಸುತ್ತದೆ. ದೊಡ್ಡ ಕಿವಿಗಳು ಕೇಳುವ ಗುಣವನ್ನು ಹೇಳುತ್ತವೆ. ಸಣ್ಣ ಕಣ್ಣುಗಳು ಏಕಾಗ್ರತೆಯನ್ನು ಸೂಚಿಸುತ್ತವೆ. ಉದ್ದವಾದ ಸೊಂಡಿಲು ಸೂಕ್ಷ್ಮವಾದದ್ದನ್ನೂ, ಬಲವಾದದ್ದನ್ನೂ ಹಿಡಿಯಬಲ್ಲ ವಿವೇಕದ ಸಂಕೇತ. ದೊಡ್ಡ ಹೊಟ್ಟೆ ಎಂದರೆ ಬದುಕಿನ ಒಳ್ಳೆಯದನ್ನೂ ಕೆಟ್ಟದ್ದನ್ನೂ ಜೀರ್ಣಿಸಿಕೊಳ್ಳುವ ಸಾಮರ್ಥ್ಯ. ಆದರೆ ಇವೆಲ್ಲಕ್ಕಿಂತ ಮುಖ್ಯವಾದುದು ಗಣೇಶನ ವಾಹನವಾದ ಮೂಷಿಕ. ದೊಡ್ಡ ದೇಹದ ದೇವರಿಗೆ ಇಷ್ಟು ಸಣ್ಣ ವಾಹನ ಯಾಕೆ?

ಇಲ್ಲಿಯೇ ಪುರಾಣದ ಒಳಗಿರುವ ಮನೋವಿಜ್ಞಾನ ತೆರೆದುಕೊಳ್ಳುತ್ತದೆ. ಮೂಷಿಕವು ಚಂಚಲ ಮನಸ್ಸಿನ ಸಂಕೇತವೆಂದು ನೋಡಬಹುದು. ಅದು ಒಂದು ಕಡೆ ನಿಲ್ಲುವುದಿಲ್ಲ. ಕತ್ತಲಲ್ಲೂ ಓಡುತ್ತದೆ. ಸಣ್ಣ ಜಾಗಕ್ಕೂ ನುಗ್ಗುತ್ತದೆ. ನಮ್ಮ ಮನಸ್ಸೂ ಹಾಗೆಯೇ. ಒಂದು ಕ್ಷಣ ಇಲ್ಲಿ, ಇನ್ನೊಂದು ಕ್ಷಣ ಅಲ್ಲಿ. ನಿನ್ನೆ ನಡೆದದ್ದನ್ನು ನೆನಪಿಸಿಕೊಳ್ಳುತ್ತದೆ; ನಾಳೆ ಆಗುವುದರ ಬಗ್ಗೆ ಚಿಂತಿಸುತ್ತದೆ. ವರ್ತಮಾನ ಮಾತ್ರ ಅದರ ಕೈಗೆ ಸಿಗುವುದಿಲ್ಲ.

ಹಾಗಾದರೆ, ಗಣೇಶನು ಮೂಷಿಕದ ಮೇಲೆ ಕುಳಿತಿದ್ದಾನೆ. ಅದರ ಅರ್ಥವೇನು?

ಮನಸ್ಸು ನಮ್ಮನ್ನು ಹೊತ್ತುಕೊಂಡು ಓಡಬಾರದು; ನಾವು ಮನಸ್ಸಿನ ಮೇಲೆ ಕುಳಿತುಕೊಳ್ಳಬೇಕು. ಅಂದರೆ ಮನಸ್ಸು ನಮ್ಮ ಬುದ್ಧಿಯ, ವಿವೇಕದ ಹಿಡಿತದಲ್ಲಿರಬೇಕು.

ಇಂದು ಗಣೇಶ ಚತುರ್ಥಿ ದೊಡ್ಡ ಉತ್ಸವವಾಗಿದೆ. ಬೀದಿಗಳಲ್ಲಿ ಪೆಂಡಾಲ್‌ಗಳು, ವಿದ್ಯುತ್ ಅಲಂಕಾರಗಳು, ಸಂಗೀತ, ಮೆರವಣಿಗೆ, ಸ್ಪರ್ಧೆಗಳು ಎಲ್ಲವೂ ಹಬ್ಬಕ್ಕೆ ಹೊಸ ಬಣ್ಣವನ್ನು ನೀಡಿವೆ. ಹಬ್ಬ ಜನರನ್ನು ಒಟ್ಟುಗೂಡಿಸುವುದು ಒಳ್ಳೆಯದೇ. ಆದರೆ ಹಬ್ಬದ ಹೊರಗಿನ ಸಂಭ್ರಮದ ನಡುವೆ ಅದರ ಒಳಗಿನ ಅರ್ಥವನ್ನು ಕಳೆದುಕೊಳ್ಳಬಾರದು. ದೇವರನ್ನು ಎಷ್ಟು ದೊಡ್ಡದಾಗಿ ಪ್ರತಿಷ್ಠಾಪಿಸಿದ್ದೇವೆ ಎಂಬುದಕ್ಕಿಂತ, ಅವನನ್ನು ನಮ್ಮೊಳಗೆ ಎಷ್ಟು ಚಿಕ್ಕದಾಗಿ, ಸರಳವಾಗಿ ಪ್ರತಿಷ್ಠಾಪಿಸಿದ್ದೇವೆ ಎಂಬುದೇ ಮುಖ್ಯ.

ಮನೆಯ ಬಾಗಿಲಲ್ಲಿ ಗಣೇಶನ ಮೂರ್ತಿ ಇದ್ದು, ಮನೆಯೊಳಗೆ ಮಾತುಗಳೇ ಇಲ್ಲದಿದ್ದರೆ ಆ ಪೂಜೆ ಪೂರ್ಣವಾಗುವುದೇ? ಗಣೇಶನಿಗೆ ನೂರು ಬಗೆಯ ನೈವೇದ್ಯ ಮಾಡಿ, ಹಸಿದವನಿಗೆ ಒಂದು ತುತ್ತು ಕೊಡಲಾಗದಿದ್ದರೆ ಆ ಭಕ್ತಿ ಎಲ್ಲಿದೆ? ದೇವರಿಗೆ ಹೂವು ಅರ್ಪಿಸಿ, ಮನುಷ್ಯನ ಮನಸ್ಸಿಗೆ ಮುಳ್ಳಾಗುತ್ತಿದ್ದರೆ ಆ ಆರತಿಯ ಬೆಳಕು ಯಾರಿಗೆ?

ಗಣೇಶನು ವಿಘ್ನವಿನಾಯಕ. ವಿಘ್ನಗಳನ್ನು ದೂರ ಮಾಡುವವನು. ಆದರೆ ಎಲ್ಲಾ ವಿಘ್ನಗಳೂ ಹೊರಗಿಲ್ಲ. ಕೆಲವು ವಿಘ್ನಗಳು ನಮ್ಮೊಳಗಿವೆ. ಅಹಂಕಾರ, ಅಸೂಯೆ, ಕೋಪ, ದ್ವೇಷ, ಅತಿಯಾದ ಆಸೆ, ಅಸಹನೆ, ಭಯ ಇವೆಲ್ಲಾ ನಮ್ಮೊಳಗೇ ಇವೆ. ಹೊರಗಿನ ಕಸವನ್ನು ತೆಗೆದುಹಾಕುವುದು ಸುಲಭ. ಆದರೆ ಮನಸ್ಸಿನ ಒಳಗಿರುವ ಕಲ್ಮಶವನ್ನು ತೆಗೆದುಹಾಕುವುದು ಕಷ್ಟ. ಆದ್ದರಿಂದ, ಗಣೇಶ ಚತುರ್ಥಿಯಂದು ನಾವು ಒಂದು ಮೂರ್ತಿಯನ್ನು ಪ್ರತಿಷ್ಠಾಪಿಸುವುದರ ಜೊತೆಗೆ ‘ನನ್ನೊಳಗಿನ ಯಾವ ವಿಘ್ನವನ್ನು ನಾನು ಈ ವರ್ಷ ವಿಸರ್ಜಿಸಲಿದ್ದೇನೆ?’ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕು.

ವಿಸರ್ಜನೆ ಎಂದರೆ ಮೂರ್ತಿಯನ್ನು ನೀರಿನಲ್ಲಿ ಬಿಡುವುದಷ್ಟೇ ಅಲ್ಲ. ನಮ್ಮೊಳಗಿನ ಯಾವುದೋ ಒಂದು ಅಹಂಕಾರವನ್ನು ಕರಗಿಸುವುದು. ಯಾವುದೋ ಒಂದು ದ್ವೇಷವನ್ನು ಬಿಡುವುದು. ಯಾರಿಗೋ ಹೇಳಲಾಗದೆ ಉಳಿದ ಕ್ಷಮೆಯನ್ನು ಕೇಳುವುದು. ತಪ್ಪನ್ನು ಒಪ್ಪಿಕೊಳ್ಳುವುದು. ಮನಸ್ಸಿಗೆ ಸ್ವಲ್ಪ ಮೌನ ಕೊಡುವುದು. ಅದೇ ನಿಜವಾದ ವಿಸರ್ಜನೆ.

ಮಣ್ಣಿನ ಗಣೇಶನನ್ನು ನಾವು ಪೂಜಿಸುತ್ತೇವೆ. ಆದರೆ ಗಣೇಶ ಮಣ್ಣಿನವನಲ್ಲ. ಮಣ್ಣು ಅವನ ರೂಪ ಮಾತ್ರ. ಹಾಗೆಯೇ, ಮನುಷ್ಯನ ದೇಹವೂ ಒಂದು ರೂಪ. ಅದರೊಳಗಿನ ಚೈತನ್ಯವೇ ನಿಜವಾದ ಸತ್ಯ. ಇಂದು ಇರುವ ರೂಪ ನಾಳೆ ಇರುವುದಿಲ್ಲ. ಆದರೆ ನಾವು ಬದುಕಿನಲ್ಲಿ ಬಿತ್ತಿದ ಪ್ರೀತಿ, ಮಾಡಿದ ಒಳ್ಳೆಯ ಕೆಲಸ, ಯಾರದೋ ಕಣ್ಣೀರನ್ನು ಒರೆಸಿದ ಕ್ಷಣ ಅವು ರೂಪವಿಲ್ಲದಿದ್ದರೂ ಉಳಿಯುತ್ತವೆ.

ಎಂದಿನಂತೆ ಈ ವರ್ಷವೂ ಹಬ್ಬ ಮುಗಿಯುತ್ತದೆ. ಮೂರ್ತಿ ವಿಸರ್ಜನೆಯಾಗುತ್ತದೆ. ಅಲಂಕಾರಗಳು ಕಳಚುತ್ತವೆ. ಪೆಂಡಾಲ್‌ಗಳು ತೆರವಾಗುತ್ತವೆ. ಆದರೆ –

ಮೂರ್ತಿ ನೀರಿನಲ್ಲಿ ಕರಗಲಿ,
ಆದರೆ ವಿವೇಕ ಕರಗದಿರಲಿ.

ಹೂವು ಬಾಡಲಿ,
ಆದರೆ ಪ್ರೀತಿ ಬಾಡದಿರಲಿ.

ಮಣ್ಣಿನ ರೂಪ ಮಾಯವಾಗಲಿ,
ಆದರೆ ಮನಸ್ಸಿನೊಳಗೆ ಹಚ್ಚಿದ ಜ್ಞಾನದ ಬೆಳಕು ಮಾಯವಾಗದಿರಲಿ.

ಬಹುಶಃ, ಆಗಲೇ ಗಣೇಶ ಚತುರ್ಥಿ ಒಂದು ದಿನದ ಹಬ್ಬವಾಗದೆ, ಪ್ರತಿದಿನವೂ ನಮ್ಮೊಳಗೆ ನಡೆಯುವ ಒಂದು ಪುಟ್ಟ ಆತ್ಮಪೂಜೆಯಾಗುತ್ತದೆ.

✍️ಡಾ. ಮೈತ್ರಿ ಭಟ್, ವಿಟ್ಲ

- Advertisement -

Related news

error: Content is protected !!