Monday, July 27, 2026
spot_imgspot_img
spot_imgspot_img

ಮೇಲ್ಜಾತಿ ಅಧಿಕಾರಿಗಳಿಂದ ದಲಿತ ಸಿಬ್ಬಂದಿಗೆ ಕಿರುಕುಳ ಆರೋಪ; ವೀಡಿಯೊ ಮೂಲಕ ನೋವು ತೋಡಿಕೊಂಡ ಡಿಸಿಆರ್‌ಇ ಇನ್‌ಸ್ಪೆಕ್ಟರ್

- Advertisement -
- Advertisement -

ಬೆಂಗಳೂರು: ಗೃಹ ಇಲಾಖೆಯ ಅಧೀನದಲ್ಲಿರುವ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದಲ್ಲಿಯೇ ಮೇಲ್ಜಾತಿ ಅಧಿಕಾರಿಗಳಿಂದ ದಲಿತ ಅಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಡಿಸಿಆರ್‌ಇ (ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ) ಇನ್‌ಸ್ಪೆಕ್ಟರ್ ಟಿ.ಆರ್.ಶ್ರೀನಿವಾಸ್ ಆರೋಪಿಸಿದ್ದಾರೆ.

ಈ ಬಗ್ಗೆ ಡಿಸಿಆರ್‌ಇನ ಪೊಲೀಸ್ ಮಹಾನಿರ್ದೇಶಕ ಉಮೇಶ್ ಕುಮಾರ್ ಅವರಿಗೆ ಬರೆದ ಪತ್ರವನ್ನು ಅವರು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ್ದಾರೆ.ಈ ಸಂಬಂಧ ಇತ್ತೀಚೆಗೆ ವೀಡಿಯೊವನ್ನು ಕೂಡಾ ಬಿಡುಗಡೆ ಮಾಡಿರುವ ಅವರು, ಎಸ್‌ಸಿ, ಎಸ್‌ಟಿ ಮೇಲಿನ ದೌರ್ಜನ್ಯ ಪ್ರಕರಣ ತನಿಖೆ ನಡೆಸುವ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದಲ್ಲಿಯೇ ಮೇಲ್ಜಾತಿ ಅಧಿಕಾರಿಗಳಿಂದ ಕಿರುಕುಳ ಆಗುತ್ತಿದೆ ಎಂದು ದೂರಿದ್ದಾರೆ.ಟಿ.ಆರ್.ಶ್ರೀನಿವಾಸ್ ಅವರು ವೀಡಿಯೊದಲ್ಲಿ ಡಿಸಿಆರ್‌ಇನ ಎಸ್ಪಿ ಕರಿಬಸನಗೌಡ ಹಾಗೂ ಡಿವೈಎಸ್ಪಿ ಮಹೇಶ್ವರಗೌಡ ಅವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಮೇಲ್ಜಾತಿಯ ಆರೋಪಿಗಳ ಪರವಾಗಿ ಕೆಲಸ ಮಾಡುವಂತೆ ಒತ್ತಡ ಹೇರಲಾಗುತ್ತಿತ್ತು ಮತ್ತು ತನ್ನ ವಿರುದ್ಧ ಸುಳ್ಳು ದೂರುಗಳನ್ನು ಸ್ವೀಕರಿಸಿ, ತನಿಖೆ ಹೆಸರಲ್ಲಿ ಕಿರುಕುಳ ನೀಡಲಾಗುತ್ತಿದೆ. ಎಂದು ಇನ್‌ಸ್ಪೆಕ್ಟರ್ ಟಿ.ಆರ್.ಶ್ರೀನಿವಾಸ್ ಆರೋಪಿಸಿದ್ದಾರೆ.

ತನ್ನನ್ನು ಅಧಿಕೃತವಾಗಿ ಡಿಸಿಆರ್‌ಇನಿಂದ ಕರ್ತವ್ಯದಿಂದ ಬಿಡುಗಡೆಗೊಳಿಸಿಲ್ಲ. ಆದರೆ, ಎಸ್ಪಿ ಕರಿಬಸನಗೌಡರು ಹಾಗೂ ಕೆಳಹಂತದ ಡಿವೈಎಸ್ಪಿ ಮಹೇಶ್ವರಗೌಡ ಅವರು, ತನ್ನನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆಯೆಂದು ನಕಲಿ ದಾಖಲೆ ಸೃಷ್ಟಿಸಿ ಕಳಿಸಿದ್ದಾರೆ.

ಇದು ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ( ಕೆಎಟಿ) ಆದೇಶಕ್ಕೆ ವಿರುದ್ಧವಾದುದಾಗಿದೆ. 20 ವರ್ಷ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಕೆಲಸ ಮಾಡಿದ್ದು, ಈಗ ನನ್ನ ವಿರುದ್ಧ ಕುತಂತ್ರ ನಡೆಸಲಾಗುತ್ತಿದೆ ಎಂದು ಟಿ.ಆರ್.ಶ್ರೀನಿವಾಸ್ ಆರೋಪಿಸಿದ್ದಾರೆ.ದಲಿತರ ಪರ ಕೆಲಸ ಮಾಡುವುದು, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವುದು ದೊಡ್ಡ ತಪ್ಪು ಅಂತನಿಸುತ್ತದೆ. ಅದರಲ್ಲೂ ನಾವು ದಲಿತರೆಂದು ಸಾಕಷ್ಟು ಕೆಲಸ ಕಾರ್ಯ ಮಾಡುತ್ತಾ ಬರುತ್ತಿದ್ದೇವೆ. ದಲಿತ ಅಧಿಕಾರಿಗಳಿಗೆ ಕರ್ನಾಟಕ ಸರಕಾರದಲ್ಲಿ ರಕ್ಷಣೆ ಇಲ್ಲದಂತಾಗಿದೆ. ನಮ್ಮ ಇಲಾಖೆಯಲ್ಲಿ ಯಾವುದೂ ಪಾರದರ್ಶಕವಾಗಿ ನಡೆಯುತ್ತಿಲ್ಲ, ಬದಲಿಗೆ ಎಲ್ಲವೂ ಮೇಲ್ಜಾತಿಯವರದ್ದೇ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅವಘಡ ಆಗುವುದಕ್ಕೆ ಕಾರಣ ಮಾಡಿಕೊಡಬೇಡಿ ಎಂದು ಟಿ.ಆರ್.ಶ್ರೀನಿವಾಸ್ ವೀಡಿಯೊದಲ್ಲಿ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಇದು ಹೀಗೆಯೇ ಮುಂದುವರಿದರೆ ಮುಂದಿನ ಅವಘಡಕ್ಕೆ ನೀವೇ ಹೊಣೆಗಾರರು ಎಂದು ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಡಿಜಿ-ಐಜಿಪಿ ಅವರನ್ನು ಉಲ್ಲೇಖಿಸಿ ತಿಳಿಸಿದ್ದಾರೆ.ಕಳೆದ ತಿಂಗಳು ಶ್ರೀನಿವಾಸ್ ಅವರನ್ನು ಡಿಸಿಆರ್‌ಇನಿಂದ ವರ್ಗಾವಣೆ ಮಾಡಲಾಗಿತ್ತು. ಆದರೆ ಶ್ರೀನಿವಾಸ್ ಅವರು ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ (ಕೆಎಟಿ)ದ ಮೊರೆಹೋಗಿ ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದರು.ಡಿಸಿಆರ್‌ಇ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಮಾಡಿರುವ ಆರೋಪಗಳನ್ನು ಎಸ್ಪಿ ಕರಿಬಸನ ಗೌಡ ನಿರಾಕರಿಸಿದ್ದಾರೆ.

- Advertisement -

Related news

error: Content is protected !!