Sunday, July 19, 2026
spot_imgspot_img
spot_imgspot_img

ಚಿಣ್ಣರೇ… ನೀವು ದಡ್ಡರಲ್ಲ……..

- Advertisement -
- Advertisement -

🖊️ರಾಧಾಕೃಷ್ಣ ಎರುಂಬು

ಶೀರ್ಷಿಕೆ ಚೆನ್ನಾಗಿದೆಯಲ್ಲ. ಚಿಣ್ಣರೂ… ಚಿನ್ನರಾಗಿಸಲು ಪ್ರಯತ್ನಿಸುವ ಪೋಷಕರೂ, ಶಿಕ್ಷಕರೂ ತಾಳ್ಮೆಯಿಂದ ಓದೋಣ. ದಾರಿ ತಪ್ಪಿಸುವುದೆಂದರೆ ಗುರಿ ತಲುಪಲು ಬಿಡದಿರುವುದೆಂದಲ್ಲ. ಕೆಲವೊಮ್ಮೆ ಮಾರ್ಗದರ್ಶನ ಮಾಡುವವರ ಆಜ್ಞಾನದ ಉಪದೇಶಗಳೂ, ಅಸಮರ್ಪಕ ಊಹೆ ಮತ್ತು ತೀರ್ಪುಗಳು ಪುಟ್ಟ ಮಕ್ಕಳನ್ನು ದಾರಿ ತಪ್ಪಿಸುತ್ತದೆ. “ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೆ” ತಿಳಿವಿಗೆ ಸಾಟಿಯಾದ ಪಾವನವಾದ ವಸ್ತು ಬೇರೊಂದಿಲ್ಲ ಎನ್ನುವ ಹಾಗೆ, ಮಕ್ಕಳನ್ನು ತಾತ್ಸಾರದಿಂದ ಕಾಣುವ ಗುರು ಯಾ ಪೋಷಕರ ಗ್ರಹಿಕೆ ಮಗುವಿನ ಹಾದಿ ತಪ್ಪಿಸುತ್ತದೆ.

ಪೋಷಕರೇ ಮತ್ತು ಶಿಕ್ಷಕರೇ… ನಾವಂದುಕೊಂಡಂತೆ ನಮ್ಮ ಮಕ್ಕಳಿಲ್ಲ. ನಮ್ಮ ಜ್ಞಾನಕ್ಕಿಂತ ನೂರು ಪಟ್ಟು ಮೇಲಿದ್ದಾರೆ ನಮ್ಮ ಶಿಷ್ಯರು. ಆದರೆ ವಿಷಯ ಏನು ಮತ್ತು ಎತ್ತ ಎಂಬ ನೇರ ಉತ್ತರ ಹೇಳಿದರೆ ಸಾಕು ನಾವು, ಉಳಿದುದನ್ನು ಅವರೇ ಮಾಡುತ್ತಾರೆ. ಯಾವಾಗ ನಮ್ಮ ನಡೆ ನಿಜ ತತ್ವಗಳ ವಿರುದ್ಧ ಮತ್ತು ವಿಳಂಬವಾಗಿರುತ್ತದೋ ಅಲ್ಲಿಂದ ನಮಗೆ ವಿರುದ್ಧ ಮಾತನಾಡದಿದ್ದರೂ ನಾವೇನೆಂದು ಚೆನ್ನಾಗಿ ಗ್ರಹಿಸಬಲ್ಲರು ನಮ್ನ ಚಿಣ್ಣರು. ನಾವು ಅಂದುಕೊಳ್ಳೋದಷ್ಟೇ ನಾನು ಅಮ್ಮ ಅಥವಾ ಅಮ್ಮನ ಹಾಗೆಂದು ಅಥವಾ ಅಪ್ಪ ಯಾ ಅಪ್ಪನ ಹಾಗೇ ಎಂದು. ನಿಮ್ಮ ವಾದ (ಬುದ್ದಿ ವಾದ ) ನಿಮ್ಮ ತೃಪ್ತಿಗಷ್ಟೇ. ನಮ್ಮ ಕಾಲದಲ್ಲಿ ನಾವು ಅರಗಿಸಿಕೊಳ್ಳುವಂತೆ, ಹೆದರಿಕೊಂಡಂತೆ ಈಗಿನ ನಮ್ಮ ಮಕ್ಕಳು ಇಲ್ಲವೇ ಇಲ್ಲ. ಬುದ್ದಿ ಹೇಳಲು ಸಾವಿರ ಮಾಧ್ಯಮಗಳಿವೆ ನಡೆದು ತೋರಿಸಬೇಕಷ್ಟೆ ನಾವು,ಪ್ರದರ್ಶನಕಾರರಂತೆ.

ವಿದ್ಯಾರ್ಥಿಗಳೇ…
ನಿಮ್ಮದು ಅಜ್ಜ ನೆಟ್ಟ ಆಲದ ಮರಕ್ಕೆ ಜೋತುಬೀಳುವ ಕಾಲವಿದಲ್ಲ. ಎಲ್ಲವು ಎಲ್ಲಾ ಕಡೆಯಿಂದ ದೊರೆಯುತ್ತಿರುತ್ತದೆ. ಒಳ್ಳೆದು ಕೆಟ್ಟದು ಯಾವುದೆಂಬುದರ ನಿರ್ಣಯ ನಿಮಗೂ ಕಷ್ಟವೇ. ಯಂತ್ರವಾಗಿದ್ದರೆ ಧಾರಾಳ ಒಪ್ಪಬಹುದು ಯಾಕೆಂದರೆ ಅದಕ್ಕೆ ತಾರತಮ್ಯತೆಯಿಲ್ಲ. ಈ ಉಪ್ಪು ತಿನ್ನುವ, ಜೀವವಿರುವ ನಮ್ಮವರೆನ್ನುವವರಲ್ಲಿ ಸ್ವಾರ್ಥವೆಂಬ ವಿಷ ಬೂದಿಯೊಳಗಿನ ಕೆಂಡದಂತೆ ಜಿಗಿ ಜಿಗಿಯುತ್ತಿರುತ್ತದೆ. ನೀವು ಭಟ್ಟಿಇಳಿಸಿ ಸ್ವೀಕರಿಸಬೇಕಷ್ಟೆ. ನಿಮ್ಮ ಬಾಲ್ಯದ ನಡೆ ಚೆನ್ನಾಗಿಯೇ ಇತ್ತು ನಿಷ್ಕಲ್ಮಶವಾಗಿ. ನಮ್ಮವರ ಸಹವಾಸ, ಮಾತು ಕೇಳಿ ಹಾಳಾದ್ದು ಅನಿಸಿದ್ದರೂ ತಪ್ಪಲ್ಲ, ಆದರೆ ನಮ್ಮತನ ಬಿಟ್ಟದ್ದು ನಮ್ಮನ್ನು ಸೋಲುವಂತೆ ಮಾಡಿದ್ದು. ಗುರಿ ಗಟ್ಟಿಯಿದ್ದರೆ ಗುರುವಿರದ ದಾರಿಯಲ್ಲೂ ನಡೆದುದರ ಸಾಕ್ಷಿ ಇದೆ, ಆದರೆ ಗುರುಭಕ್ತಿ, ವಿಷಯಾಸಕ್ತಿ ಇರಬೇಕಷ್ಟೆ. ನಿಮ್ಮ ಹವ್ಯಾಸಗಳು( ಒಳ್ಳೆಯದು ಮತ್ತು ಕೆಟ್ಟದ್ದು) ಯಾರೂ ಹೇರಿದ್ದಲ್ಲ ಅದು ನಿಮಗೆ ತೃಪ್ತಿ ಮತ್ತು ಯಶಸ್ಸು ಕೊಟ್ಟಿಲ್ಲವೇ. ನಮ್ಮವರ ವಿರೋಧಗಳ ನಡುವೆಯೂ ಅದು ಚಿಗುರಲಿಲ್ಲವೇ? ಹಾಗೇ ನಮ್ಮ ಶ್ರೇಷ್ಠತೆಗೆ ಗುರಿ ಮತ್ತು ಆಸಕ್ತಿಗಳು ಗುರುವಲ್ಲದೆ… ಇನ್ನಾರು ಅಲ್ಲ. ಅವರೆಲ್ಲ ಇದ್ದರೂ ರುಚಿಗೆ ಒಂದಿಷ್ಟು ಉಪ್ಪಿನಂತೆ.
ಸನಾತನ ಸಂಸ್ಕೃತಿಯಲ್ಲಿ ಗುರುವಿಗೆ ಸ್ಥಾನಮಾನವಿತ್ತು. ಆಗ ಅವರು ಓಡಾಡುವ ಪುಸ್ತಕಗಳಂತೆ, ಆಚರಣೆಯಲ್ಲೂ ಗುರುತ್ವವಿತ್ತು. ಈಗ… ಗುರುವಿನ ಗುರಿ ಶಿಷ್ಯನ ಒಳಿತಿಗಿಂತ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಾ….ಅವನ ಸ್ವತಂತ್ರತೆಯನ್ನು ಕಾನೂನಿನ ಕಟ್ಟಳೆಯೊಳಗೆ ಬಂದಿಯಾಗಿಸಿದೆ.

ವಿದ್ಯಾರ್ಜನೆಗೆ ನೆಲೆ ಆಶ್ರಮವಿತ್ತು, ತ್ಯಾಗಮಯಿ ಗುರುಕುಲ ವಿತ್ತು. ಅಲ್ಲಿ ಜ್ಞಾನಕ್ಕಿಂತ ಬದುಕಲು ಕಲಿಸುತಿದ್ದರು. ನಮ್ಮ ಬದುಕಿಗೆ ಪೂರಕವಾದ ಪರಿಸರ ಎಲ್ಲವನ್ನು ಕಲಿಸುತಿತ್ತು. ಈಗ ನೋಡಿ ಕಲಿ ಮಾಡಿ ತಿಳಿ ಪುಸ್ತಕದ ಪುಟದಲ್ಲಷ್ಟೇ ಇದ್ದು, ಮಸ್ತಕಕ್ಕೆ ವಾಸನೆಯಷ್ಟೇ ಬಂದಿರುವುದು. ಇದೆಲ್ಲ ಅರಿವಾಗುವಾಗ ಮಕ್ಕಳಿಗೆ ಮಕ್ಕಳಾಗಿರುತ್ತದೆ. ಕಾಲ ಹಾಳಾಗಿಲ್ಲ. ಅಭಿವೃದ್ಧಿ ಕಂಡಿದೆ. ವ್ಯವಸ್ಥೆಯು ಬದಲಾಗುತಿದೆ. ಇದು ಜಗದ ನಿಯಮ ಆದರೆ ವೇಗದ ನಡಿಗೆಗೆ ಗುರು ಶಿಷ್ಯರು ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿ ವಿಫಲರಾಗಿದ್ದೇವೆ ಅಷ್ಟೇ. ನಾವು ಹೀಗಿದ್ದೆವು ಎನ್ನುವುದನ್ನು ಪಟ್ಟು ಬಿಡದೆ ಸಮರ್ಥಿಸುವ ಗುರು.. ಮತ್ತು ಹೊಸತನದ ಆಶ್ರಯದಲ್ಲಿ ಬೆಳೆಯುವ ಚಿಣ್ಣರು. ಅಸಮತೋಲನದ ಬದುಕಲ್ಲಿ ಹಿಡಿತಕ್ಕೆ ಸಿಗದೆ ವೇಗಕ್ಕೆ ಅಪ್ಪಚ್ಚಿಯಾಗುತ್ತಿರುವ ವಿಶ್ವಾಸ, ಸಂಸ್ಕಾರ ಸಂಸ್ಕೃತಿ. ಜೀವ – ಜೀವನಕ್ಕೆ ಸನಾತನ ಬದುಕಿನ ಅನುಸರಣೆ ಅನಿವಾರ್ಯವಾಗಿ ಒಡಂಬಡಿಕೆ ಮಾಡಿಕೊಳ್ಳುತ್ತಿದ್ದೇವೆ ಅಷ್ಟೇ. ಈ ದೆಸೆಯಲ್ಲಿ ಜ್ಞಾನಿಗಳಾಗಿ ವರ್ತಿಸುವ ತಿಳಿಹೇಳುವ ನಮ್ಮ ಮಾರ್ಗದರ್ಶಿತ್ವ ಸರಿಯಾಗಿರಲಿ, ಇಲ್ಲವಾದರೆ ಚಿಣ್ಣರೊಡನೆ ಸಣ್ಣವರಾಗುತ್ತೇವೆ. ಓ ಚಿಣ್ಣರೆ… ನೀವೆಂದೂ ದಡ್ಡರಲ್ಲ. ಮಕ್ಕಳೇ… ಭಿನ್ನವಾದ ಆಲೋಚನೆ, ಭಿನ್ನವಾದ ನಡೆ, ಯಶಸ್ಸಿನ ಕಡೆ ನಡೆಯುವ ಹಾದಿ. ನಿಮ್ಮ ಅನಿಸಿಕೆ ಆಲೋಚನೆಗೆ ಮಾನ್ಯತೆ ಕೊಡಿ. ಹೆಚ್ಚೆಚ್ಚು ಪ್ರಶ್ನಿಸುವ ಮನಸ್ಸಿರಲಿ. ಜ್ಞಾನಕ್ಕಾಗಿ ಓದಿ ಅಂಕಗಳಿಗಾಗಿ ಅಲ್ಲ. ಹೆಚ್ಚು ಓದುವ ಸ್ವತಂತ್ರ ಕಾರ್ಯ ನಿರ್ವಹಣೆ ಮಾಡುತ್ತಾ ಮಕ್ಕಳಾಗಿ ಇದ್ದು ಬಿಡಿ. ಮಾರ್ಗದರ್ಶಕರೇ ಇದಕ್ಕೆಲ್ಲ ದಯವಿಟ್ಟು ಅವಕಾಶ ಮಾಡಿಕೊಡಿ.. ಇಷ್ಟೇ ನನ್ನ ಭಿನ್ನಹ.

🖊️ರಾಧಾಕೃಷ್ಣ ಎರುಂಬು

- Advertisement -

Related news

error: Content is protected !!