


ರಾಮನಗರ: ಇಸ್ರೇಲ್-ಇರಾನ್ ಯುದ್ಧದ ಎಫೆಕ್ಟ್ ಭಾರತದ ಮೇಲೆ ಒಂದಲ್ಲ ಒಂದು ರೀತಿಯ ಪರಿಣಾಮ ಬೀರುತ್ತಿದ್ದು, ಗ್ಯಾಸ್, ಪೆಟ್ರೋಲಿಯಂ ಉತ್ಪನ್ನ ಸೇರಿ ಹಲವು ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ.
ಇದರ ಜೊತೆಗೆ ಬೊಂಬೆ ಉದ್ಯಮಕ್ಕೂ ಯುದ್ಧದ ಬಿಸಿ ತಟ್ಟಿದ್ದು, ಅಂತಾರಾಷ್ಟ್ರೀಯ ಮಟ್ಟದ ಪ್ರಖ್ಯಾತಿ ಇರುವ ಚನ್ನಪಟ್ಟಣ ಬೊಂಬೆಗಳ ರಫ್ತಿಗೆ ಅಡ್ಡಿಯಾಗಿದೆ. ಅಮೆರಿಕಾ ಸೇರಿ ಹಲವು ಗಲ್ಪ್ ದೇಶಗಳಿಗೆ ಹಡಗುಗಳ ಮೂಲಕ ರಫ್ತಾಗ್ತಿದ್ದ ಬೊಂಬೆಗಳು ಹಾಗೂ ಮರದ ಆಟಿಕೆಗಳು ಕಾರ್ಖಾನೆಯಲ್ಲೇ ಉಳಿಯುವಂತಾಗಿದೆ
ಚನ್ನಪಟ್ಟಣದ ಕ್ರಾಫ್ಟ್ ಪಾರ್ಕ್ನಲ್ಲಿ ತಯಾರಾಗುವ ಶೇ.30ರಷ್ಟು ಮರದ ಗೊಂಬೆಗಳು, ಆಟಿಕೆಗಳು ಹಾಗೂ ಇನ್ನಿತರ ಅಲಂಕಾರಿಕ ಕಲಾಕೃತಿಗಳು ವಿದೇಶಕ್ಕೆ ರಫ್ತಾಗುತ್ತವೆ. ಚನ್ನಪಟ್ಟಣದ ಬೊಂಬೆಗಳಿಗೆ ವಿದೇಶದಲ್ಲಿ ಬಾರಿ ಬೇಡಿಕೆ ಇದ್ದು, ಬೇಡಿಕೆಗೆ ತಕ್ಕಂತೆ ತಯಾರಿಕಾ ಕಾರ್ಯ ನಡೆಯುತ್ತದೆ. ಆದರೆ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ಇಸ್ರೇಲ್-ಇರಾನ್ ಯುದ್ಧದಿಂದ ಬೊಂಬೆ ಆರ್ಡರ್‌ಗಳ ಸಂಖ್ಯೆ ಇಳಿಕೆಯಾಗಿದೆ.
ಬೊಂಬೆ ಉದ್ಯಮಿಗಳಿಗೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬರಬೇಕಿದ್ದ ವಿದೇಶಿ ಆರ್ಡರ್‌ಗಳು ಬಂದಿಲ್ಲ. ಈಸ್ಟರ್, ದಸರಾ, ಕ್ರಿಸ್ಮಸ್ ಹಬ್ಬಗಳಿಗೆ ಇಷ್ಟೊತ್ತಿಗಾಗಲೇ ವಿದೇಶಿ ಗ್ರಾಹಕರು ತಮಗೆ ಬೇಕಾಗುವ ಗೊಂಬೆಗಳು ಹಾಗೂ ಮರದ ಆಕೃತಿಗಳನ್ನ ಆರ್ಡರ್ ಮಾಡುತಿದ್ದರು, ಆದರೆ ಯುದ್ಧದ ಆತಂಕ ಹಿನ್ನೆಲೆ ಆರ್ಡರ್ ವಿಳಂಬ ಆಗ್ತಿದೆ. ಈಗಾಗಲೇ ಆರ್ಡರ್ ಮಾಡಿರುವ ಗ್ರಾಹಕರು ತಮ್ಮ ಆರ್ಡರ್ ಹೋಲ್ಡ್ ಮಾಡುವಂತೆ ತಿಳಿಸಿದ್ದು, ಆರ್ಡರ್ ಹೋಲ್ಡ್ ಆದ್ರೆ ನಾವು ಪ್ರೊಡಕ್ಷನ್ ಕೂಡಾ ನಿಲ್ಲಿಸಬೇಕಾಗುತ್ತೆ. ಅಲ್ಲದೇ ಹಡಗುಗಳ ಮೂಲಕ ನಮ್ಮ ವಸ್ತುಗಳು ರಫ್ತಾಗೋದ್ರಿಂದ ಸಮುದ್ರದಲ್ಲಿ ಸಿಲುಕುವ ಆತಂಕ ಕೂಡಾ ಇದೆ. ಹಾಗಾಗಿ ತಾತ್ಕಾಲಿಕವಾಗಿ ರಫ್ತು ನಿಲ್ಲಿಸಿದ್ದೇವೆ ಎಂದು ಗೊಂಬೆ ಉದ್ಯಮಿ ತಿಳಿಸಿರುವುದಾಗಿ ವರದಿಯಿಂದ ತಿಳಿದುಬಂದಿದೆ.








