Wednesday, July 22, 2026
spot_imgspot_img
spot_imgspot_img

ಕೇಪು: ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಸೇರುವ ಪ್ರಸಿದ್ಧ ಕ್ಷೇತ್ರ ಕೇಪು ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರಿ ಸನ್ನಿಧಾನದಲ್ಲಿ ಕಜಂಬು ಉತ್ಸವ

- Advertisement -
- Advertisement -

ವಿಟ್ಲ ಸೀಮೆಯ 16 ಗ್ರಾಮಗಳಲ್ಲಿ ಬರೀ ಕಾಲ್ನಡಿಗೆಯಲ್ಲಿ ಸಂಚರಿಸುವ ’ನಾಲ್ಪೋಳು’ ಈ ಕ್ಷೇತ್ರದ ವಿಶೇಷತೆ..!

ಇಲ್ಲಿ ಎಲ್ಲೆಂದರಲ್ಲಿ ಮಕ್ಕಳ ನಗು-ಅಳು ಎಲ್ಲವೂ ಒಟ್ಟಿಗೇ ಕೇಳಿಸುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಸೇರುವ ಈ ವಿಶಿಷ್ಟ ಕ್ಷೇತ್ರವಿರುವುದು ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕೇಪು ಎಂಬಲ್ಲಿ. ಕೇಪು ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ನಡೆಯುವ ಕಜಂಬು ಉತ್ಸವ ಎನ್ನುವ ವಿಶಿಷ್ಟ ಆರಾಧನೆಯಲ್ಲಿ ಮಕ್ಕಳೇ ಪ್ರಧಾನ.

800 ವರ್ಷದ ಇತಿಹಾಸ ಪ್ರಸಿದ್ಧ ಕೇಪು ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರಿ ಸನ್ನಿಧಾನದಲ್ಲಿ ಕಾಲಾವಧಿ ಕಜಂಬು ಉತ್ಸವದ ಸಂಭ್ರಮ. ಇಂದು ಉಳ್ಳಾಲ್ತಿ ಅಮ್ಮನವರನ್ನು ಕಾಣಲು ಹರಿದು ಬರುವ ಭಕ್ತ ಸಾಗರ ಒಂದೆಡೆಯಾದರೆ, ನಡುಗಿಸುವ ಚಳಿಯಲ್ಲಿ ತಣ್ಣೀರಿನ ಧಾರೆಯೊಂದಿಗೆ ಚೀರಾಡುವ ಮಕ್ಕಳ ಕೂಗು ಇನ್ನೊಂದೆಡೆ.

ಮಕ್ಕಳನ್ನು ಸಾಂಕೇತಿಕವಾಗಿ ತಾಯಿಗೆ ಅರ್ಪಿಸಿದಾಗ ಮಾತ್ರ ತಾಯಿ ಸಂತುಷ್ಟಳಾಗುತ್ತಾಳೆ ಎನ್ನುವ ನಂಬಿಕೆ ಆಚರಣೆಯನ್ನು ಭಕ್ತಿಯಿಂದ ಪಾಲಿಸಿಕೊಂಡು ಬರುವ ಏಕೈಕ ಸಾನಿಧ್ಯ ಅಂದರೆ ಅದು ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನ.

ಈ ಜಾತ್ರೆಯ ಸಂದರ್ಭ ದೇವಾಲಯದ ಒಳಾಂಗಣದಲ್ಲಿ ವಿಶಿಷ್ಠ ಉಡುಗೆಯನ್ನು ತೊಟ್ಟ ನಾಲ್ಕು ಜನ ದೈವದ ಮಾಣಿಗಳನ್ನು ವಿಶೇಷವಾಗಿ ಕಾಣಬಹುದು. ಇವರನ್ನು ತುಳುವಿನಲ್ಲಿ ನಾಲ್ಪೊಳು ಎಂದು ಕರೆಯಲಾಗುತ್ತದೆ. ಜಾತ್ರೆಗೆ ಗೊನೆ ಮುಹೂರ್ತ ನಡೆದ ದಿನದಿಂದ ಜಾತ್ರೆಗೆ ಸಂಬಂಧಪಟ್ಟ ಎಲ್ಲಾ ಕೆಲಸ ಕಾರ್ಯಗಳ ಪೂರ್ವ ತಯಾರಿಗಾಗಿ ಊರಿನಲ್ಲಿ ಸಂಚರಿಸಲು ಅರಮನೆಯ ಪ್ರತಿನಿಧಿಗಳಾಗಿ ಈ ನಾಲ್ವರನ್ನು ಈ ಕ್ಷೇತ್ರಕ್ಕೆ ಕಳುಹಿಸಲಾಗುತ್ತದೆ. ಮೊದಲು ವಿಟ್ಲ ಅರಮನೆಯಿಂದ ಎರುಂಬು ಎಂಬ ಸ್ಥಳಕ್ಕೆ ಬಂದು ಅಲ್ಲಿಂದ ಬಳಿಕ ಮುಳಿಯ ತಾಳಿಪಡ್ಪುವಿನಲ್ಲಿರುವ ಗದ್ದೆಗೆ ಬರುತ್ತಾರೆ. ಅಲ್ಲಿನ ಜಾಗಕ್ಕೆ ಸಂಬಂಧಪಟ್ಟ ಪ್ರಮುಖರು ಇವರಿಗೆ ವೀಳ್ಯದೆಲೆ, ಅಡಿಕೆ ನೀಡಿ ಅವರಿಗೆ ಆ ಜಾಗದಲ್ಲಿ ಇವರಿಗೆ ಶ್ರದ್ಧೆ ಭಕ್ತಿಯಿಂದ ’ನಾಲ್ಪೋಳು’ ಎಂಬ ಹೆಸರನ್ನು ನೀಡಲಾಗುತ್ತದೆ. ಮುಂದೆ ಇವರನ್ನು ಇದೇ ’ನಾಲ್ಪೋಳು’ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ.

ಈ ನಾಲ್ಪೋಳು ಎಂಬ ಹೆಸರಿನಿಂದ ಕರೆಯಲ್ಪಡುವರರು ವಿಟ್ಲ ಸೀಮೆಯ 16 ಗ್ರಾಮಗಳಿಗೆ ಕಾಲ್ನಡಿಗೆಯಲ್ಲಿಯೇ ಸಂಚಾರ ಮಾಡುತ್ತಾರೆ. ಪ್ರದಾಯದಂತೆ ಆಯಕಟ್ಟಿನ ದೈವ ದೇವರುಗಳ ಸನ್ನಿಧಿಗಳಿಗೆ ಭೇಟಿ ನೀಡಿ ಭಕ್ತರಿಗೆ ಉಳ್ಳಾಲ್ತಿ ಅಮ್ಮನ ಅಭಯ ನೀಡಿ ಕಾಣಿಕೆ, ಹರಿಕೆಗಳನ್ನು ಸ್ವೀಕರಿಸಿ ಮರಳಿ ಬಂದು ಗಣಗಳಿಗೆ ೩೯ ಕೋಳಿಗಳ ಬಲಿ ನಡೆದು, ಏರಿದ ಧ್ವಜವನ್ನು ಇಳಿಸುವಲ್ಲಿಗೆ ಕಜಂಬು ಉತ್ಸವ ಮುಕ್ತಾಯವಾಗುತ್ತದೆ. ಕಜಂಬು ನಡೆಯುವ ವೇಳೆ ದೈವಸ್ಥಾನದ ನಾಲ್ಕು ಮೂಲೆಗಳಲ್ಲಿ ಇವರು ಬಿಳಿ ವಸ್ತ್ರವನ್ನು ನೆಲದಲ್ಲಿ ಹಾಸಿ ಕುಳಿತಿರುತ್ತಾರೆ. ಕಜಂಬು ಮಾಡಿಸುವ ಮಕ್ಕಳು ನಾಲ್ಕು ಮೂಲೆಗಳಲ್ಲಿ ಕುಳಿತಿರುವ ಈ ನಾಲ್ವರಿಗೂ ನಮಿಸಿ, ಹರಿಕೆ ಸಮರ್ಪಿಸುವುದು ಇಲ್ಲಿನ ಸಂಪ್ರದಾಯ.

- Advertisement -

Related news

error: Content is protected !!