


ಪುತ್ತೂರು ನಿವಾಸಿ ಯಶೋಧರ ಎಂಬವರಿಗೆ ಅಪರಿಚಿತ ವ್ಯಕ್ತಿಯೋರ್ವ ವಿವಿಧ ಮೊಬೈಲ್ ಸಂಖ್ಯೆಗಳ ಮೂಲಕ ದೂರವಾಣಿ ಕರೆ ಮಾಡಿ, ತಾನು ಇನ್ಸುರೆನ್ಸ್ ಕಂಪೆನಿಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ ಇನ್ಸುರೆನ್ಸ್ ಮಾಡಿಸಿಕೊಡುವುದಾಗಿ ಹೇಳಿ ಹಣ ಪಾವತಿಸಲು ಒತ್ತಾಯಿಸಿದ್ದನು. ಈ ಬಗ್ಗೆ ಫಿರ್ಯಾದಿದಾರರು ನಿರಾಕರಿಸಿದ್ದರು. ಆ ಬಳಿಕ ಆರೋಪಿ ಇನ್ಸುರೆನ್ಸ್ ಕ್ಯಾನ್ಸಲ್ ಮಾಡುವುದಾಗಿ ತಿಳಿಸಿ, ಫಿರ್ಯಾದಿದಾರರ ಕ್ರೆಡಿಟ್ ಕಾರ್ಡ್ ನಂಬರ್ ಹಾಗೂ OTP ಪಡೆದು, ಅವರ ಕ್ರೆಡಿಟ್ ಕಾರ್ಡ್‌ನಿಂದ ರೂ.2,37,036/- ಮೊತ್ತವನ್ನು ಬೇರೆ ಖಾತೆಗೆ ವರ್ಗಾಯಿಸಿರುವುದು ತಿಳಿದುಬಂದಿದೆ.

ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ: 52/2025, ಐಟಿ ಕಾಯ್ದೆ ಸೆಕ್ಷನ್ 66(D) ಹಾಗೂ BNS ಸೆಕ್ಷನ್ 318(4), 319(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು.
ತನಿಖೆಯ ವೇಳೆ ಮಹಾರಾಷ್ಟ್ರ ಮೂಲದ ಹಾಗೂ ಪ್ರಸ್ತುತ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯಲ್ಲಿ ವಾಸಿಸುತ್ತಿರುವ ಅವಿನಾಶ್ ರಮೇಶ್ ಗೌಡ (24) ಎಂಬಾತನನ್ನು ದಿನಾಂಕ 11-02-2026 ರಂದು ದಸ್ತಗಿರಿ ಮಾಡಲಾಗಿದೆ. ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.








