Thursday, April 25, 2024
spot_imgspot_img
spot_imgspot_img

‘ತುಂಬೆ’ಳಕು ಪಸರಿಸಿದ ಮಹಾನ್ ವ್ಯಕ್ತಿತ್ವ ಇನ್ನಿಲ್ಲ.

- Advertisement -G L Acharya panikkar
- Advertisement -

ತುಂಬೆ ಬಿ.ಎ.ಗ್ರೂಪ್ ದೇಶ ವಿದೇಶದಲ್ಲಿ ಚಿರಪರಿಚಿತ ಹೆಸರು. ಇದನ್ನು ಹುಟ್ಟು ಹಾಕಿ ಬೆಳೆಸಿದ ಬಿ.ಎ. ಅಹ್ಮದ್ ಹಾಜಿ ಮುಹಿಯುದ್ದೀನ್ ಇಂದು (16/08/2020) ಬೆಳಿಗ್ಗೆ 11 ಗಂಟೆಗೆ ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ತನ್ನ 87ನೇ ವಯಸ್ಸಲ್ಲಿ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇನೆ. ತುಂಬೆ ಹಾಜಾರ್ ಎಂದಾಗ ದಕ್ಷಿಣಕನ್ನಡ ಜಿಲ್ಲೆಯ ಶೈಕ್ಷಣಿಕ, ಸಾಮಾಜಿಕ, ಔದ್ಯಮಿಕ, ಸಾಂಸ್ಕೃತಿಕ, ಧಾರ್ಮಿಕ ಹೀಗೇ ಎಲ್ಲಾ ಮುಖಗಳೂ ಅನಾವರಣಗೊಳ್ಳುತ್ತದೆ. ಬಿ.ಎ. ಟಿಂಬರ್ ಉದ್ಯಮದಿಂದ ಪ್ರಾರಂಭಿಸಿ ವಿವಿಧ ಸ್ಥರದ ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಯನ್ನು ಕಟ್ಟುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ ಧೀರ ವ್ಯಕ್ತಿತ್ವ. ಒಂದು ಕಾಲದಲ್ಲಿ ಮುಸಲ್ಮಾನರು ಕೇವಲ ಪ್ರಾಥಮಿಕ ಶಿಕ್ಷಣಕ್ಕೆ ಮಾತ್ರ ಸೀಮಿತ ಎಂಬ ಅಘೋಷಿತ ಕಲ್ಪನೆ ಇದ್ದಾಗ ದಕ್ಷಿಣಕನ್ನಡ ಜಿಲ್ಲೆಯ ಮುಸ್ಲಿಮರ ಶೈಕ್ಷಣಿಕ ಅಭಿವೃದ್ಧಿಗಾಗಿ ಪಣತೊಟ್ಟು ಶಿಕ್ಷಣ ಕ್ರಾಂತಿ ಮಾಡಿ ಸಮುದಾಯದ ಸಬಲೀಕರಣಕ್ಕೆ ದೊಡ್ಡ ಕೊಡುಗೆ ನೀಡಿದವರು ತುಂಬೆ ಹಾಜಿ.

ಇತ್ತೀಚಿನ ವರ್ಷದಲ್ಲಿ ಅವರು ಅನಾರೋಗ್ಯದಿಂದಿದ್ದರೂ ಸಮಾಜ ಸೇವೆಯಿಂದ ಹಿಂದೆ ಸರಿದಿರಲಿಲ್ಲ. ವ್ಹೀಲ್ ಚೆಯರ್ ನಲ್ಲೇ ಸುತ್ತಾಡಿದರು. ಕಾರಿನ ಸೀಟನ್ನು ಇವರಿಗೆ ಆಸೀನರಾಗುವಂತೆ ಮೋಡಿಫೈ ಮಾಡಿ ಸಮುದಾಯದೊಂದಿಗೆ ತಲ್ಲೀನರಾಗಿದ್ದರು. ಅವರ ಮಕ್ಕಳು ಪ್ರಕಾಶಿಸಿದ ‘ಅಬ್ಬ’ ಪುಸ್ತಕ ಕಳೆದ ವರ್ಷ ಗಣ್ಯರ ಸಮ್ಮುಖ ಬಿಡುಗಡೆಗೊಂಡಿತ್ತು. ಅಜ್ಮಾನ್ ತುಂಬೆ ಯುನಿವರ್ಸಿಟಿ ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು. ಜಿಲ್ಲೆಯ ಪ್ರತಿಷ್ಟಿತ ಮನೆತನದ ಯೇನಪೋಯ ಮೊಯ್ದಿನ್ ಕುಂಞಿ ಅವರ ಅಳಿಯನಾಗಿರುವ ತುಂಬೆ ಅಹ್ಮದ್ ಹಾಜಿ ಮುಹಿಯುದ್ದೀನ್ ಅವರು ಸೆಂಟ್ರಲ್ ಕಮಿಟಿ, ಸೀರತ್ ಕಮಿಟಿ ಮೊದಲಾದ ಪ್ರತಿಷ್ಟಿತ ಸಂಸ್ಥೆಗಳನ್ನು ಹುಟ್ಟು ಹಾಕಿ ಮಾನವೀಯ ಸೇವೆಗೆ ಅಡಿಪಾಯ ಹಾಕಿದ್ದರು. ಬಿ.ಎ.ಸಮೂಹ ಸಂಸ್ಥೆ ಕೇವಲ ಉದ್ಯಮ ಮಾತ್ರವಲ್ಲ, ಶಿಕ್ಷಣ ಕ್ಷೇತ್ರದಲ್ಲೂ ದೊಡ್ಡ ಕೊಡುಗೆ ನೀಡಿದೆ. ಇಲ್ಲಿ ನೀಡುವ ಕ್ವಾಲಿಟಿ ಎಜುಕೇಶನ್ ರಾಜ್ಯಕ್ಕೇ ಮಾದರಿಯಾಗಿದೆ.

ನಾನು 18 ವರ್ಷಗಳ ಹಿಂದೆ ‘ವಿಜಯ ಕರ್ನಾಟಕ’ ಬಂಟ್ವಾಳ ತಾಲೂಕು ವರದಿಗಾರನಾಗಿದ್ದಂತಹ ಸಂದರ್ಭ ತುಂಬೆ ಅಹ್ಮದ್ ಹಾಜಿ ಅವರ ಜೊತೆ ಉತ್ತಮ ಒಡನಾಟವಿತ್ತು. ಅವರು ಅಂದು ನೀಡುತ್ತಿದ್ದಂತಹ ಕೆಲವೊಂದು ಸಲಹೆಗಳು, ಬೋಧನೆಗಳು ನನ್ನ ಜೀವನದಲ್ಲಿ ಇಂದಿಗೂ ತುಂಬಾ ಸಹಕಾರಿಯಾಗಿದೆ. ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದ ಅದ್ವಿತೀಯ ಸಾಧಕನ ಅಗಲುವಿಕೆ ತುಂಬಾ ನೋವು ತಂದಿದೆ. ಅವರ ಅಂತಿಮ ದರ್ಶನವು ಮಧ್ಯಾಹ್ನ ಬಳಿಕ 03 ಗಂಟೆಗೆ ತುಂಬೆ ಬಿ.ಎ. ಕಾಲೇಜು ಆವರಣದಲ್ಲಿ ನಡೆಯಲಿದೆ. ನಂತರ ತುಂಬೆ ಮಸೀದಿಯಲ್ಲಿ ಅಂತ್ಯ ಸಂಸ್ಕಾರ ನೆರವೇರುವುದೆಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ. ತುಂಬೆಯ ತುಂಬೆಳಕು ಚೆಲ್ಲಿದ ಬಿ.ಎ. ಅಹ್ಮದ್ ಹಾಜಿ ಮುಹ್ಯುದ್ದೀನ್ ಅವರ ಪಾರತ್ರಿಕ ಜೀವನ ಸುಗಮವಾಗಲಿ. ಕುಟುಂಬ ವರ್ಗ ಹಾಗೂ ಅಭಿಮಾನಿ ಬಳಗಕ್ಕೆ ದುಖ ಸಹಿಸುವ ಶಕ್ತಿ ನೀಡಲೆಂದು ಸೃಷ್ಟಿಕರ್ತನಲ್ಲಿ ಪ್ರಾರ್ಥಿಸುವೆನು.
-ರಶೀದ್ ವಿಟ್ಲ.

- Advertisement -

Related news

error: Content is protected !!