
ವಿಟ್ಲ: ಕಡಂಬು ಶ್ರೀ ಕಲ್ಕುಡ ಕಲ್ಲುರ್ಟಿ, ಕೊಡಮಣಿತ್ತಾಯ, ರುದ್ರಾಂಡಿ ಹಾಗೂ ಪರಿವಾರ ದೈವಂಗಳ ದೈವಸ್ಥಾನದಲ್ಲಿ ವಾರ್ಷಿಕ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಇಂದು (ಏಪ್ರಿಲ್ 24) ಒಲಸರಿ ಜಾತ್ರೆ ವೈಭವದಿಂದ ನಡೆಯಲಿದೆ.
ಶ್ರೀ ಪರಾಭವ ನಾಮ ಸಂವತ್ಸರದ ಮೇಷ ಮಾಸದ ವಿಶೇಷ ದಿನದ ಪ್ರಯುಕ್ತ ನಡೆಯುವ ಈ ಜಾತ್ರೆಗೆ ಭಕ್ತರು ಕುಟುಂಬ ಸಮೇತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಜಾತ್ರೆಯ ಅಂಗವಾಗಿ ರಾತ್ರಿ 8.00 ಗಂಟೆಗೆ ಕೊಡಮಣಿತ್ತಾಯ ಮತ್ತು ಕಲ್ಲುಡ ದೈವಗಳಿಗೆ ಒಲಸರಿ ನೇಮ ನಡೆಯಲಿದೆ. ನಂತರ ರಾತ್ರಿ 8.30ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.ಇದೇ ವೇಳೆ ರಾತ್ರಿ 10.30ಕ್ಕೆ ರುದ್ರಾಂಡಿ, ಕಲ್ಲುರ್ಟಿ ಹಾಗೂ ಪರಿವಾರ ದೈವಗಳಿಗೆ ಕೋಲ ಸೇವೆ ನಡೆಯಲಿದ್ದು, ಧಾರ್ಮಿಕ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಲಿವೆ.
ಈ ವಾರ್ಷಿಕ ಕಾರ್ಯಕ್ರಮಗಳ ಆರಂಭವಾಗಿ ಏಪ್ರಿಲ್ 17ರಂದು ಗೊನೆ ಮುಹೂರ್ತ ಹಾಗೂ ಏಪ್ರಿಲ್ 21ರಂದು ಬೆಳಿಗ್ಗೆ 10 ಗಂಟೆಗೆ ಕೋರಿ ಗೂಂಬ ಕಾರ್ಯಕ್ರಮಗಳು ನೆರವೇರಿದ್ದವು.ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಊರಿನ ಹತ್ತು ಸಮಸ್ತರು ಭಕ್ತರನ್ನು ಜಾತ್ರೆಯಲ್ಲಿ ಭಾಗವಹಿಸಿ, ದೈವಗಳ ಪ್ರಸಾದವನ್ನು ಸ್ವೀಕರಿಸಿ ಆಶೀರ್ವಾದ ಪಡೆಯುವಂತೆ ವಿನಂತಿಸಿದ್ದಾರೆ.








