


ಮಂಗಳೂರು: ರಾಜ್ಯದ ಡಿಜಿಟಲ್ ಮೂಲಸೌಕರ್ಯವನ್ನು ವಿಸ್ತರಿಸುವುದರ ಜೊತೆಗೆ ಪರಿಸರ ಸಂರಕ್ಷಣೆಗೂ ಒತ್ತು ನೀಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯನ್ನಿದ್ದು, ಮಂಗಳೂರಿನ ತಣ್ಣೀರುಬಾವಿಯಲ್ಲಿ ಭಾರತದ ಮೊದಲ ಸುಸ್ಥಿರ ಕರಾವಳಿ ಡೇಟಾ ಸೆಂಟರ್ ಸ್ಥಾಪಿಸುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸುತ್ತಿದೆ.
ಐಟಿ-ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳೂರಿನ ತಣ್ಣೀರುಬಾವಿಯಲ್ಲಿರುವ ಪ್ರಸ್ತಾವಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯೋಜನೆಯ ಕಾರ್ಯಸಾಧ್ಯತೆಗಾಗಿ ಇಲ್ಲಿ ಸುಮಾರು 49 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಕರಾವಳಿ ನಿಯಂತ್ರಣ ವಲಯದ ನಿಯಮಗಳ ಅನ್ವಯ ಈ ಪೈಕಿ ಸುಮಾರು 20 ಎಕರೆ ಪ್ರದೇಶದಲ್ಲಿ ಶಾಶ್ವತ ನಿರ್ಮಾಣ ಕೈಗೊಳ್ಳಲು ಅವಕಾಶವಿದೆ ಎಂದು ಅಂದಾಜಿಸಲಾಗಿದೆ.
ಸ್ಥಳ ಪರಿಶೀಲನೆಯ ಬಳಿಕ ಮಾತನಾಡಿದ ಸಚಿವರು, “ನಾವು ಒಪ್ಪಲಿ, ಬಿಡಲಿ ಎಐ ಈಗ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಎಐ ಯುಗದಲ್ಲಿ ಡೇಟಾ ಸೆಂಟರ್ಗಳು ಅತ್ಯಗತ್ಯ ಮೂಲಸೌಕರ್ಯಗಳಾಗಿವೆ. ಆದರೆ, ನೀರು ಮತ್ತು ವಿದ್ಯುತ್ ಅನ್ನು ಸಮರ್ಥವಾಗಿ ಬಳಸಿಕೊಂಡು, ಪರಿಸರಕ್ಕೆ ಯಾವುದೇ ಧಕ್ಕೆಯಾಗದಂತೆ ಇವುಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಹೊಣೆಗಾರಿಕೆ. ತಂತ್ರಜ್ಞಾನ ಆಧಾರಿತ ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಸುಸ್ಥಿರತೆ ಎರಡೂ ಜೊತೆಯಾಗಿ ಸಾಗಬಲ್ಲವು ಎಂಬುದನ್ನು ತೋರಿಸುವುದೇ ನಮ್ಮ ಉದ್ದೇಶವಾಗಿದೆ” ಎಂದರು.
ಕರ್ನಾಟಕ ಸುಸ್ಥಿರ ಡೇಟಾ ಸೆಂಟರ್ ನೀತಿ 2026–2031’ರ ಅಡಿಯಲ್ಲಿ ರಾಜ್ಯದಲ್ಲಿ 1 ಗಿಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ ಮೂಲಸೌಕರ್ಯ ನಿರ್ಮಿಸುವ ಗುರಿ ಹೊಂದಲಾಗಿದೆ. ಈ ಡೇಟಾ ಸೆಂಟರ್ನಲ್ಲಿ ನವೀಕರಿಸಬಹುದಾದ ಇಂಧನ ಬಳಕೆ, ಸುಧಾರಿತ ಶೀತಲೀಕರಣ ತಂತ್ರಜ್ಞಾನ ಮತ್ತು ಜವಾಬ್ದಾರಿಯುತ ನೀರಿನ ನಿರ್ವಹಣೆಗೆ ಆದ್ಯತೆ ನೀಡಲಾಗುವುದು.
ಸ್ಥಳದ ಕಾರ್ಯಸಾಧ್ಯತೆ, ಮೂಲಸೌಕರ್ಯ ಮತ್ತು ಪರಿಸರದ ಅಂಶಗಳ ಕುರಿತು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು, ಜಿ.ಪಂ. ಸಿಇಒ ಹಾಗೂ ತಜ್ಞರೊಂದಿಗೆ ಸಮಾಲೋಚಿಸಿ ಸಮಗ್ರ ‘ಶ್ವೇತಪತ್ರ’ ಸಿದ್ಧಪಡಿಸಲಾಗುವುದು. ಇದು ಖಾಸಗಿ ಹೂಡಿಕೆದಾರರೊಂದಿಗೆ ಚರ್ಚಿಸಲು ಆಧಾರವಾಗಲಿದೆ.
ತಂತ್ರಜ್ಞಾನ ಮತ್ತು ಹೂಡಿಕೆ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಬಾರದು ಎಂಬ ‘ಬಿಯಾಂಡ್ ಬೆಂಗಳೂರು’ ದೂರದೃಷ್ಟಿಯ ಭಾಗವಾಗಿ ಈ ಯೋಜನೆಯನ್ನು ರೂಪಿಸಲಾಗುತ್ತಿದೆ.
ಮಂಗಳೂರು, ಮಣಿಪಾಲ ಮತ್ತು ಉಡುಪಿ ಭಾಗವನ್ನು ಜಾಗತಿಕ ಸಾಮರ್ಥ್ಯ ಕೇಂದ್ರಗಳು, ಸ್ಟಾರ್ಟ್ಅಪ್ಗಳು, ಡೀಪ್ಟೆಕ್ ಮತ್ತು ಸಾಗರ ಜೈವಿಕ ತಂತ್ರಜ್ಞಾನದ ಪ್ರಮುಖ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ. ಕರಾವಳಿ ಪ್ರದೇಶವು ಈಗಾಗಲೇ ಸುಮಾರು 5,000 ಕೋಟಿ ಮೌಲ್ಯದ ಐಟಿ ರಫ್ತು ದಾಖಲಿಸಿದ್ದು, ಈ ಹೊಸ ಯೋಜನೆಯಿಂದ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.








