ಹೊಸದಿಲ್ಲಿ: ಎಲ್ಲ ಸಂಸ್ಥೆಗಳಲ್ಲಿ ಮಹಿಳೆಯರಿಗೆ ವೇತನಸಹಿತ ಮುಟ್ಟಿನ ರಜೆಯನ್ನು ಕೋರಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ವಿಲೇವಾರಿ ಮಾಡಿತು. ಸಂಬಂಧಪಟ್ಟ ಎಲ್ಲರ ಜೊತೆ ಸಮಾಲೋಚಿಸಿ ಮುಟ್ಟಿನ ರಜೆ ನೀತಿಯನ್ನು ರೂಪಿಸಲು ಈ ರಿಟ್ ಅರ್ಜಿಯನ್ನು ಪರಿಗಣಿಸುವಂತೆ ಅದು ಕೇಂದ್ರ ಸರಕಾರಕ್ಕೆ ಸೂಚಿಸಿತು. ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಶಾಸನದ ಮೂಲಕ ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವುದು ಮಹಿಳೆಯರ ಉದ್ಯೋಗದ ಮೇಲೆ ಅನುದ್ದೇಶಿತ ಪರಿಣಾಮಗಳನ್ನು ಬೀರಬಹುದು ಎಂದು ಕಳವಳವನ್ನು ವ್ಯಕ್ತಪಡಿಸಿತು.

ರಜೆ ಕಡ್ಡಾಯವು ಉದ್ಯೋಗದಾತರು ಮಹಿಳೆಯರನ್ನು ನೇಮಿಸಿಕೊಳ್ಳುವುದನ್ನು ನಿರುತ್ತೇಜಿಸಬಹುದು,ತನ್ಮೂಲಕ ಕಾರ್ಯಪಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು ನ್ಯಾಯಾಲಯವು ಹೇಳಿತು.
ಯಾವುದೇ ಮಹಿಳೆಯು ಈ ವಿಷಯದಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಿಲ್ಲ ಎನ್ನುವುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಜಾಯಮಾಲ್ಯ ಬಾಗ್ನಿ ಅವರ ಪೀಠವು, ಅರ್ಜಿದಾರ ಶೈಲೇಂದ್ರ ಮಣಿ ತ್ರಿಪಾಠಿಯವರ ಅಧಿಕಾರ ಸ್ಥಾನವನ್ನು ಪ್ರಶ್ನಿಸಿತು. ಇದು ಈ ವಿಷಯದಲ್ಲಿ ಸಲ್ಲಿಸಲಾದ ಮೂರನೇ ರಿಟ್ ಅರ್ಜಿಯಾಗಿದೆ. ಫೆ.2023ರಲ್ಲಿ ಮೊದಲ ಅರ್ಜಿಯನ್ನು ವಿಲೇವಾರಿ ಮಾಡಿದ್ದ ನ್ಯಾಯಾಲಯವು,ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವಾಲಯದ ಮುಂದೆ ಅಹವಾಲು ಸಲ್ಲಿಸಲು ಅವಕಾಶ ನೀಡಿತ್ತು. 2024ರಲ್ಲಿ ಮತ್ತೆ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದ ಅರ್ಜಿದಾರರು,ತನ್ನ ಅಹವಾಲಿಗೆ ಸಚಿವಾಲಯವು ಪ್ರತಿಕ್ರಿಯಿಸಿಲ್ಲ ಎಂದು ತಿಳಿಸಿದ್ದರು. ಜು.2024ರಲ್ಲಿ ಸದ್ರಿ ಅರ್ಜಿಯನ್ನು ವಿಲೇವಾರಿ ಮಾಡಿದ್ದ ನ್ಯಾಯಾಲಯವು,ನೀತಿ ಸರ್ಕಾರವೊಂದನ್ನು ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಸೂಚಿಸಿತ್ತು.ಪ್ರಸಕ್ತ ಅರ್ಜಿಯಲ್ಲಿ ಮಹಿಳೆಯರು ಎದುರಿಸುವ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿದ್ದ ಅರ್ಜಿದಾರರು,ಇವುಗಳನ್ನು ಗುರುತಿಸುವ ಕಾನೂನು/ನೀತಿಗಳು/ಸರಕಾರಿ ಆದೇಶಗಳನ್ನು ಹೊರಡಿಸಲು ಹಾಗೂ ಸಂವಿಧಾನದ 14 ಮತ್ತು 21ನೇ ವಿಧಿಗಳಿಗೆ ಅನುಗುಣವಾಗಿ ರಜೆ ಸೇರಿದಂತೆ ಅಗತ್ಯ ಪರಿಹಾರಗಳನ್ನು ಒದಗಿಸಲು ಕೇಂದ್ರ,ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡುವಂತೆ ಕೋರಿದ್ದರು.ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಎಂ.ಆರ್.ಶಂಶಾದ್ ಅವರು ಕರ್ನಾಟಕ ಸರಕಾರವು ಮಾತ್ರ ಮುಟ್ಟಿನ ರಜೆಗೆ ಅವಕಾಶ ನೀಡುವ ನೀತಿಯನ್ನು ರೂಪಿಸಿದೆ ಎಂದು ತಿಳಿಸಿದರು.
ಆದಾಗ್ಯೂ ವಿಷಯವನ್ನು ಪರಿಗಣಿಸಲು ಪೀಠವು ಒಲವು ವ್ಯಕ್ತಪಡಿಸಲಿಲ್ಲ.ಮುಟ್ಟಿನ ರಜೆಯು ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂದು ಹೇಳಿದ ನ್ಯಾಸೂರ್ಯಕಾಂತ, ನೀವು ನಿಜವಾಗಿಯೂ ಕಳಕಳಿಯನ್ನು ಹೊಂದಿರುವ ಅರ್ಜಿದಾರರಲ್ಲ. ಇದು ಮೂಲತಃ ಯುವತಿಯರಲ್ಲಿ ನಿಮಗೆ ಈಗಲೂ ಕೆಲವು ನೈಸರ್ಗಿಕ ಸಮಸ್ಯೆಗಳಿವೆ ಮತ್ತು ನೀವು ಪುರುಷರಿಗೆ ಸಮಾನರಲ್ಲ ಹಾಗೂ ನಿರ್ದಿಷ್ಟ ಸಮಯದಲ್ಲಿ ನೀವು ಪುರುಷರಂತೆ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಭಾವನೆಯನ್ನು ಮೂಡಿಸುವ ಏಕೈಕ ಉದ್ದೇಶದಿಂದ ಸಲ್ಲಿಸಿರುವ ಅರ್ಜಿಯಾಗಿದೆ ಎಂದು ಹೇಳಿದರು.








