Thursday, May 9, 2024
spot_imgspot_img
spot_imgspot_img

ವೀರಕಂಭ: ಮಜಿ ಶಾಲೆಯಲ್ಲಿ ನಿರ್ಮಾಣಗೊಂಡ 10 ಕೊಠಡಿಗಳ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ

- Advertisement -G L Acharya panikkar
- Advertisement -
vtv vitla

ಶಿಕ್ಷಣ ಪಡೆಯುವುದರಿಂದ ಸಿಗುವ ಮೌಲ್ಯ ಅದರಿಂದ ಪ್ರೇರಕ ಆಗುವಂತಹ ಮಾನವ ವಿಕಾಸ ಆದಾಗ ಮಾತ್ರ ವ್ಯಕ್ತಿಯೊಬ್ಬನ ಪರಿಪೂಣ೯ ವ್ಯಕ್ತಿತ್ವ ಸಾಕಾರಗೊಳ್ಳಲು ಸಾಧ್ಯವಾಗುವುದು. ಮನೆಯೇ ಮೊದಲ ಪಾಠಶಾಲೆ ಅಲ್ಲಿ ಸಿಗುವ ಸಂಸ್ಕಾರಯುತವಾದ ಶಿಕ್ಷಣ ಜಗತ್ತಿನ ಯಾವ ವಿಶ್ವ ವಿಧ್ಯಾನಿಲಯವೂ ನೀಡಲಾರದು. ಎಳವೆಯಿಂದಲೇ ಈ ರೀತಿಯಲ್ಲಿ ಪಡೆದ ಶಿಕ್ಷಣ ಅವರ ಬದುಕಿಗೆ ಒಂದು ನಿಜವಾದ ಅರ್ಥಕೊಡಲೂ ಸಾಧ್ಯ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ ರಾಜೇಶ್ ನಾಯ್ಕ ಉಳಿಪಾಡಿಗುತ್ತು ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಮಜಿ ವೀರಕಂಭದ ಎಂ.ಆರ್.ಪಿ.ಎಲ್ ನ ಸಿ.ಎಸ್.ಆರ್ ನಿಧಿಯಿಂದ ನಿಮಾ೯ಣಗೊಂಡ 10 ಕೊಠಡಿಗಳ ಹಾಗೂ ಮಜಿ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಶತಮಾನೋತ್ಸವ ಸಮಿತಿಗಳ ವತಿಯಿಂದ ಸುಮಾರು 10.5 ಲಕ್ಷ ವೆಚ್ಚದಲ್ಲಿ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ ಸಮಾರಂಭ ಹಾಗೂ ಶಾಲಾ ಶತಮಾನೋತ್ಸವದ ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಮಂಜುನಾಥ ಭಂಡಾರಿ‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಾಲೆಯ ಸರ್ವತೋಮುಖ ಏಳಿಗೆಗೆ ಊರವರ ಸಹಕಾರ ಬಹುಮುಖ್ಯವಾದ ಪಾತ್ರ ವಹಿಸುತ್ತದೆ . ಉತ್ತಮ ಬಾಂಧವ್ಯವನ್ನು ಹೊಂದಿರುವ ಶಾಲೆಗಳು ಮಾತ್ರ ಬೆಳೆಯಲು ಸಾಧ್ಯವಾಗಿದೆ. ಅನುದಾನಗಳನ್ನು ಬಳಸಿಕೊಳ್ಳುವ ಜಾಣ್ಮೆಯು ಒಂದು ಮಹತ್ತರವಾದ ಘಟ್ಟ ಎಂದು ತಿಳಿಸಿದರು.

ಮಾಜಿ ಉಸ್ತುವಾರಿ ಸಚಿವರಾದ ಶ್ರೀ ರಮಾನಾಥ ರೈ ಯರು ಮಾನವನ ಸರ್ವರೀತಿಯ ಸಮಸ್ಯೆಗಳಿಗೆ ಉತ್ತಮ ಶಿಕ್ಷಣವೇ ಪರಿಹಾರ ವ್ಯಕ್ತಿಯಲ್ಲಿ ಸಚ್ಛಾರಿತ್ಯವನ್ನು ಬೆಳೆಸುವಲ್ಲಿ ಶಿಕ್ಷಣ ಕೇಂದ್ರಗಳು ಯಶಸ್ವಿಯಾದರೆ ಮಾತ್ರ ಸಮಾಜವು ತನ್ನಿಂದ ತಾನೇ ಸುಧಾರಿಸುತ್ತವೆ ಎಂದು ಮಾತನಾಡಿದರು.


ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿಯವರು ಆಂಗ್ಲ ಮಾಧ್ಯಮದ ವ್ಯಾಮೋಹದಲ್ಲಿ ನಮ್ಮ ಸಂಸ್ಕಾರ ಮರೆಯಬಾರದು ಅದೊಂದು ಭಾಷೆಯಂತೇ ಹೊರತು ಅದೇ ಮುಖ್ಯವಲ್ಲ ನಮ್ಮ ಸಂಸ್ಕಾರ ಸಂಸ್ಕತಿಯು ನಮ್ಮಲ್ಲಿಯೇ ಸಿಗಬೇಕು ಹೊರತು ಬೇರೆಲ್ಲೂ ಸಿಗಲಾರದು ಆದ್ದರಿಂದ ಮಾತೃಭಾಷಾ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.


ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶ್ರೀ ರಾಘವೇಂದ್ರ ಬಲ್ಲಾಳ್ ಸರಕಾರದ ಅನುದಾನಗಳನ್ನು ಮಾತ್ರವೇ ಕಾಯದೇ ಊರವರ ಸಹಭಾಗಿತ್ವದಲ್ಲಿ ಎಲ್ಲರೂ ಕೈ ಜೋಡಿಸಿದಾಗ ಈ ರೀತಿಯಲ್ಲಿ ಬೆಳೆಯಲು ಸಾಧ್ಯವಾಗುವುದು ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರಕಿಸುವುದರಲ್ಲಿ ಆ ಊರಿನವರ ಪಾತ್ರವೂ ವಿಶೇಷವಾಗಿ ಇರುತ್ತದೆ ಎಲ್ಲರೂ ಸೇರಿ ಕೈ ಜೋಡಿಸಿದಾಗ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುವುದು ಎಂದರು.

ಸರಕಾರಿ ಶಾಲೆ ಉಳಿಸಿ ಬೆಳೆಸಿ ಎಂಬ ರಾಜ್ಯ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಕಾಶ್ ಅಂಚನ್ ಮಾತನಾಡಿ ವೈಜ್ಞಾನಿಕವಾಗಿ ಬೆಳೆದ ಹಾಗೆ ಸಮಯಕ್ಕೆ ಸರಿಯಾದ ಪೂರಕವಾದ ಶಿಕ್ಷಣವೂ ದೊರಕಬೇಕು. ಶಾಲೆಯ ಅಭಿವೃದ್ಧಿಗಳಲ್ಲಿ ಪೋಷಕರ, ಊರವರವ ಪಾತ್ರವೂ ಹಿರಿದಾಗಿರುತ್ತದೆ. ಸರಕಾರಿ ಶಾಲೆಗಳು ಉಳಿಯಬೇಕು ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಉತ್ತಮ ಶಿಕ್ಷಣ ಸಿಗುವಲ್ಲಿ ಶ್ರಮಿಸಬೇಕು ಅದರ ಫಲವೂ ಉತ್ತಮವಾಗಿ ಇರುತ್ತದೆ ಎಂಬುದಕ್ಕೆ ಈ ಶಾಲೆಯೇ ಸಾಕ್ಷಿಯಾಗಿದೆ ಎಂದು ಅಭಿನಂದಿಸಿದರು.


ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಮಾಧವ ಮಾವೆ ಶಾಲೆಗಳು ಐಕ್ಯತೆಯ ಸಂದೇಶಗಳನ್ನು ಸಾರುತ್ತವೆ ಅಲ್ಲಿ ಅಭಿವೃದ್ಧಿ ಪರವಾದ ಕೆಲಸಗಳು ನಡೆದಾಗ ಆ ಊರೇ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದು ಎಂದು ತಮ್ಮ ಅಥಿತೇಯ ಮಾತುಗಳಲ್ಲಿ ತಿಳಿಸಿದರು.

ಶಾಲಾ ದತ್ತು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ ಎಲ್ಲಾ ಮಕ್ಕಳಿಗೂ ಉತ್ತಮ ಸಂಸ್ಕಾರಯುತವಾದ ಶಿಕ್ಷಣ ನೀಡುವುದೇ ನಮ್ಮ ಗುರಿ ಎಲ್ಲಾ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕನ್ನಡ ಮತ್ತು ಆಂಗ್ಲಮಾಧ್ಯಮ ಶಿಕ್ಷಣ ಸಿಗುವಂತಾಗಬೇಕು ಎಂಬುದೇ ನಮ್ಮ ಉದ್ದೇಶ ಎಂದರು.

ಕಾಯ೯ಕ್ರಮದಲ್ಲಿ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಯುತ ದಿನೇಶ್, ಬಂಟ್ವಾಳ ತಾಲೂಕು ಪಂಚಾಯತ್ ನ ಮಾಜಿ ಸದಸ್ಯರಾದ ಗೀತಾ ಚಂದ್ರಶೇಖರ್, ಶತಮಾನೋತ್ಸವದ ಸಮಿತಿಯ ಅಧ್ಯಕ್ಷರಾದ ನಿವೃತ್ತ ಮುಖ್ಯ ಶಿಕ್ಷಕ ಕೆ ವಿಠಲ ಶೆಟ್ಟಿ, ಶಾಲೆಯ ಸ್ಥಳ ದಾನಿಗಳ ಕುಟುಂಬಸ್ಥರಾದ ಶ್ರೀಯುತ ತಿರುಮಲ ಕುಮಾರ್ ಮಜಿ, ಎಂ.ಆರ್.ಪಿ.ಎಲ್ ನ ಜನರಲ್ ಮ್ಯಾನೇಜರ್ ಶ್ರೀಯುತ ಮಂಜುನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಟ್ಟಡದ ಕಂಟ್ರಾಕ್ಟರ್ ಸಂದೀಪ್ ಕುಮಾರ್ ಶೆಟ್ಟಿ, ಎಂ.ಆರ್.ಪಿ.ಎಲ್ ನ ಜನರಲ್ ಮ್ಯಾನೇಜರ್ ಶ್ರೀಯುತ ಮಂಜುನಾಥ್ ಶಾಲೆಯಲ್ಲಿ ಈ ಹಿಂದೆ ಕತ೯ವ್ಯ ನಿವ೯ಹಿಸಿದ್ದ ಶಿಕ್ಷಕರನ್ನು ಹಾಗೂ ಈಗ ಕತ೯ವ್ಯ ನಿವ೯ಹಿಸುತ್ತಿರುವ ಶಿಕ್ಷಕರನ್ನು, ಅಡುಗೆ ಸಿಬ್ಬಂದಿಗಳನ್ನು, ಆಯಾರವರನ್ನೂ ಸನ್ಮಾನಿಸಲಾಯಿತು. ತಮ್ಮ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಂಜೀವ ಮೂಲ್ಯ, ಹಳೆ ವಿಧ್ಯಾಥಿ೯ ಸಂಘದ ಅಧ್ಯಕ್ಷರಾದ ರಮೇಶ್ ಗೌಡ ಮತ್ತು ಕಾರ್ಯದರ್ಶಿ ಚಿನ್ನಾ ಮೈರ ಕಳೆದ 5 ವಷ೯ ಗಳಿಂದ ಅಕ್ಷರದಾಸೋಹಕ್ಕೆ ಉಚಿತ ತರಕಾರಿ ನೀಡಿ ಸಹಕರಿಸುತ್ತಿರುವ ಮಹಮ್ಮದ್ ಶರೀಫ್ ಮತ್ತು ಪೂರ್ವ ಪ್ರಾಥಮಿಕ ತರಗತಿಯ ಮಕ್ಕಳ ಬೆಳಗಿನ ಉಪಹಾರಕ್ಕೆ ಸಹಕರಿಸುತ್ತಿರುವ ಪ್ರಸಾದ್ ನಂದಂತಿಮಾರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರನ್ನು ಗೌರವಿಸಲಾಯಿತು.

ಶತಮಾನದ ಭವ್ಯ ಶಿಕ್ಷಣದ ಇತಿಹಾಸದ ವಷ೯ಗಳ ಮೇಲೆ ಬೆಳಕು ಚೆಲ್ಲುವ ನೆನಪಿನ ಹೊತ್ತಿಗೆ ಸ್ಮರಣ ಸಂಚಿಕೆ ”ಶತಸ್ಮರಣೆ” ಯನ್ನು ಬಿಡುಗಡೆ ಮಾಡಲಾಯಿತು. ಶಾಲೆಯ ಹಿರಿಯ ವಿದ್ಯಾರ್ಥಿ ಯತಿನ್ ಕೊಂಬಿಲ ತನ್ನ ಕುಂಚದಲ್ಲಿ ಬಿಡಿಸಿದ ವರ್ಣಚಿತ್ರವನ್ನು ಅನಾವರಣಗೊಳಿಸಿದ್ದರು. ಕಾರ್ಯಕ್ರಮದಲ್ಲಿ ಕಲಿಕೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿನ ಮಕ್ಕಳಿಗೆ ಬಹುಮಾನ ನೀಡಲಾಯಿತು. ಮುಖ್ಯ ಶಿಕ್ಷಕ ನಾರಾಯಣ ಪೂಜಾರಿಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಶಾಲಾ ವರದಿಯನ್ನು ವಾಚಿಸಿದರು.

ಶತಮಾನೋತ್ಸವದ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಎಂ ಸ್ವಾಗತಿಸಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಂಜೀವ ಮೂಲ್ಯ ವಂದಿಸಿ, ಶ್ರೀಯುತ ಉದಯ ಕುಮಾರ್ ಕೆಲಿಂಜ ಹಾಗೂ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಅಂಗನವಾಡಿ ಪುಟಾಣಿ, ಶಾಲಾ ಮಕ್ಕಳ ಹಾಗೂ ಹಿರಿಯ ವಿಧ್ಯಾರ್ಥಿಗಳ ಸಾಂಸ್ಕ್ರತಿಕ‌‌‌‌‌‌‌‌‌ ಕಾರ್ಯಕ್ರಮ ನಡೆದವು‌. ನಂತರದಲ್ಲಿ ತಾಂಬೂಲ ಕಲಾವಿದರು ಪುಂಜಾಲಕಟ್ಟೆ ಇವರ “ಇಂಚಲಾ ಉಂಡಾ” ಎಂಬ ಹಾಸ್ಯಮಯ ನಾಟಕ ಪ್ರದಶಿ೯ಸಲಾಯಿತು.

ಶಾಲಾ ಶತಮಾನೋತ್ಸವ ಊರ ಹಬ್ಬವಾಗಿ ಕಂಡುಬಂದಿದ್ದು ಹೊಸ ಕಟ್ಟಡವು ಹಿಂದಿನ ಪಾರಂಪರಿಕ ಶೈಲಿಯ ಗುತ್ತಿನ ಮನೆ ತರಹ ಕಟ್ಟಲಾಗಿದ್ದು, ಕಟ್ಟಡದ ಅಂದ ಹೆಚ್ಚಿಸಲು ಶಾಲಾ ಹಳೆ ವಿದ್ಯಾರ್ಥಿ ಶಿವಾನಂದ ಉಚಿತವಾಗಿ ಗಾರ್ಡನ್ ಮಾಡಿಕೊಟ್ಟಿದ್ದು, ಪೂರ್ಣವಾಗಿ ವಿದ್ಯುತ್ ದೀಪ ಹಾಗೂ ತಳಿರು-ತೋರಣಗಳಿಂದ ಅಲಂಕೃತಗೊಂಡು ಬಂದ ಶಾಲಾ ಅಭಿಮಾನಿಗಳಿಗೆ ಸಾಯಂಕಾಲದ ಫಲಹಾರ ಹಾಗೂ ರಾತ್ರಿ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.

- Advertisement -

Related news

error: Content is protected !!