ವಿಟ್ಲ: ವಿ.ಹಿಂ.ಪ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಿಟ್ಲ ಇದರ 43 ನೇ ವರ್ಷದ ಶ್ರೀ ಗಣೇಶೋತ್ಸವವು ಸೆ. 7 ರಿಂದ ಸೆ. 9 ರವರೆಗೆ ವಿಟ್ಲ ಅನಂತ ಸದನದಲ್ಲಿ ವಿವಿಧ ಧಾರ್ಮಿಕ ವೈದಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ಅದ್ದೂರಿಯಾಗಿ ನಡೆಯಿತು.
ಸೆ 7 ರಂದು ಬೆಳಗ್ಗೆ ಶ್ರೀ ಗಣೇಶನ ವಿಗ್ರಹ ಪ್ರತಿಷ್ಠೆ, ಶ್ರೀ ಮಹಾಗಣಪತಿ ಹವನ ನಡೆಯಿತು. ಬಳಿಕ ನರ್ಸಪ್ಪ ಪೂಜಾರಿ ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ನರ್ಸಪ್ಪ ಪೂಜಾರಿ ಧ್ವಜಾರೋಹಣ ಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿಶ್ವನಾಥ ನಾಯ್ತೊಟ್ಟು, ಅಧ್ಯಕ್ಷರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಕಾರ್ಯಕರ್ತ ರಾಮಯ್ಯ ಕೊಟ್ಟಾರಿ ಕಡಂಬು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಬಳಿಕ ವಿಶ್ವನಾಥ ದೇವಾಡಿಗ ಮತ್ತು ಬಳಗ ನೀರಕಣಿ ಇವರಿಂದ ಭಜನಾ ಸೇವೆ ನಡೆಯಿತು. ಬಳಿಕ ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ಬಳಿಕ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.
ಸಂಜೆ ಶ್ರೀ ಕಾಶಿ ಮಕ್ಕಳ ಭಜನಾ ತಂಡ ಕಾಶೀಮಠ ವಿಟ್ಲ ಇವರಿಂದ ಕುಣಿತ ಭಜನೆ ನಡೆಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಹಿಳಾ ಮಂಡಲ ಅಂಗನವಾಡಿ ಮಕ್ಕಳಿಂದ ಮತ್ತು ಶ್ರೀ ವರ ಯುವಕ ಮಂಡಲ (ರಿ) ಪೂರ್ಲಪ್ಪಾಡಿ ಇವರಿಂದ ನೃತ್ಯ ವೈವಿಧ್ಯ ನಡೆಯಿತು. ಬಳಿಕ ಶ್ರೀ ದೇವರಿಗೆ ರಂಗಪೂಜೆ ನಡೆಯಿತು.
ಸೆ.8 ರಂದು ಬೆಳಗ್ಗೆ ಮಹಾಗಣಪತಿ ಹವನ ನಡೆದು ಬಳಿಕ ಶ್ರೀ ವಿಶ್ವಬ್ರಾಹ್ಮಣ ಸೇವಾ ಸಂಘ ಪಡಿಬಾಗಿಲು ಇವರಿಂದ ಭಜನಾ ಸೇವೆ ನಡೆಯಿತು. ಬಳಿಕ ಶ್ರೀ ಶಕ್ತಿ ಗಣಪತಿ ಹವನ ನಡೆದು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಸಂಜೆ ಕು.ದಕ್ಷಾ ವಿ ಜೋಗಿ ವಿಟ್ಲ ಇವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು. ಬಳಿಕ ಸಾರಸತ್ವ ಭಜನಾ ಮಂಡಳಿಯವರಿAದ ಭಜನಾ ಸೇವೆ ನಡೆಯಿತು. ಸಂಜೆ ರಾಜೇಶ್ ವಿಟ್ಲ ಸಾರಥ್ಯದ ನಾಟ್ಯಗುರು ರಕ್ಷಿತ್ ಶೆಟ್ಟಿ ಪಡ್ರೆ ನಿರ್ದೇಶನದ ಆರ್.ಕೆ ಯಕ್ಷಗಾನ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಸುದರ್ಶನ ವಿಜಯ ರಕ್ತರಾತ್ರಿ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಿತು. ರಾತ್ರಿ ಶ್ರೀ ದೇವರಿಗೆ ರಂಗಪೂಜೆ ನಡೆಯಿತು.
ಸೆ.9 ರಂದು ಬೆಳಗ್ಗೆ ಮಹಾಗಣಪತಿ ಹೋಮ ನಡೆದು ಬಳಿಕ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಮಾಮೇಶ್ವರ ಇವರಿಂದ ಭಜನಾ ಸೇವೆ ನಡೆಯಿತು.
ಬಳಿಕ ವಿಶ್ವನಾಥ ನಾಯ್ತೊಟ್ಟು, ಅಧ್ಯಕ್ಷರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ನಡೆದ ನಡೆದ ಧಾರ್ಮಿಕ ಸಭೆಯಲ್ಲಿ ಶಶಾಂಕ್ ಭಟ್ ವೇಣೂರು ಧರ್ಮಾಚಾರ್ಯ ಸಂಪರ್ಕ ಪ್ರಮುಖ್ ವಿ ಹಿಂ ಪ ಪುತ್ತೂರು ಜಿಲ್ಲೆ ಇವರು ಧಾರ್ಮಿಕ ಉಪನ್ಯಾನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕೆ.ಪಿ ಸುಚರಿತ ಶೆಟ್ಟಿ ಕಡಂದಲೆ, ಅಧ್ಯಕ್ಷರು ದ.ಕ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕುಲಶೇಖರ ಮಂಗಳೂರು,ಅಜಕ್ಕಳ ಶ್ಯಾಮ್ ಭಟ್ ಪಾಲುದಾರರು ಸಪ್ತ ಜ್ಯುವೆಲ್ಸ್, ಕೆ ಎಸ್ ಸಂಕಪ್ಪ ಗೌಡ ಕೈಂತಿಲ, ಮಾಜಿ ಅಧ್ಯಕ್ಷರು ಎಪಿಎಂಸಿ ಬಂಟ್ವಾಳ ಇವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಮಧ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ ನಡೆದು ಬಳಿಕ ಶ್ರೀ ದೇವರ ವಿಸರ್ಜನಾ ಶೋಭಾಯಾತ್ರೆಯು ಬಹಳ ಆಕರ್ಷಣೀಯವಾಗಿ ವಿಟ್ಲ ಪೇಟೆಯ ಪ್ರಮುಖ ರಸ್ತೆಗಳಲ್ಲಿ ಸಾಗಿಬಂದು ಶ್ರೀ ಅನಂತೇಶ್ವರ ದೇವಸ್ಥಾನದ ಕೆರೆಯ ಬಳಿ ಪೂಜೆ ನಡೆದು, ವಂದೇ ಮಾತರಂ , ಧ್ವಜಾವತರಣ ನಂತರ ಕೆರೆಯಲ್ಲಿ ವಿಗ್ರಹ ಜಲಸ್ತಂಭನ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡರು.