Wednesday, May 8, 2024
spot_imgspot_img
spot_imgspot_img

ಬಂಟ್ವಾಳ: ರೈಲು ನಿಲ್ದಾಣದಲ್ಲಿ ಹೃದಯಾಘಾತಕ್ಕೊಳಗಾದ ವ್ಯಕ್ತಿಯ ಪ್ರಾಣ ಉಳಿಸಿದ ನೆಲ್ಯಾಡಿಯ ಉಪನ್ಯಾಸಕಿ

- Advertisement -G L Acharya panikkar
- Advertisement -

ಬಂಟ್ವಾಳ: ಬೆಂಗಳೂರಿನ ಮಗಳ ಮನೆಗೆ ಹೊರಟ ಉಪನ್ಯಾಸಕಿಯೊಬ್ಬರು ತಾವು ತೆರಳಬೇಕಿದ್ದ ರೈಲನ್ನು ಬಿಟ್ಟು ಅಸ್ವಸ್ಥಗೊಂಡ ಪ್ರಯಾಣಿಕರೊಬ್ಬರ ಪ್ರಾಣ ಉಳಿಸಿ ಮಾನವೀಯತೆ ಮೆರೆದ ಘಟನೆ ಬಂಟ್ವಾಳ ನಿಲ್ದಾಣದಲ್ಲಿ ನಡೆದಿದೆ. ಸ್ವಲ್ಪ ದಿನಗಳ ನಂತರ ಕಾಕತಾಳೀಯವಾಗಿ ಮತ್ತೆ ಆಸ್ಪತ್ರೆಯಲ್ಲಿ ಮುಖಾಮುಖೀಯಾಗಿ ವೈದ್ಯರಿಂದ ಪ್ರಶಂಸಾ ಪತ್ರ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನೆಲ್ಯಾಡಿಯಲ್ಲಿರುವ ಮಂಗಳೂರು ವಿ.ವಿ. ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಬಿ.ಸಿ.ರೋಡು ನಿವಾಸಿ ಹೇಮಾವತಿ ಅವರು ಸೆ. 28ರ ರಾತ್ರಿ ಬಂಟ್ವಾಳದಿಂದ ಬೆಂಗಳೂರಿನಲ್ಲಿರುವ ಮಗಳ ಮನೆಗೆ ತೆರಳಲು ರೈಲಿಗಾಗಿ ಕಾಯುತ್ತಿದ್ದರು. ರೈಲು ಆಗಮಿಸುವಷ್ಟರಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತಗೊಂಡು ಬಿದ್ದರು. ತಕ್ಷಣ ಉಪನ್ಯಾಸಕಿ ಅವರ ರಕ್ಷಣೆಗೆ ಮುಂದಾಗಿ ತಾವು ಹೋಗಬೇಕಿದ್ದ ರೈಲನ್ನು ಬಿಟ್ಟರು. ವ್ಯಕ್ತಿಯ ರಕ್ಷಣೆಗೆ ಬರುವಂತೆ ಇತರ ಪ್ರಯಾಣಿಕರಲ್ಲಿ ವಿನಂತಿಸಿದರೂ ಯಾರೂ ಬಂದಿರಲಿಲ್ಲ.

ರಿಕ್ಷಾ ಮೂಲಕ ಆ ವ್ಯಕ್ತಿಯನ್ನು ಬಿ.ಸಿ.ರೋಡಿನ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದರು. ಬಳಿಕ ಆ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಯಿತು. ಮರುದಿನ ಬೆಳಗ್ಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆ ವ್ಯಕ್ತಿಯ ಆರೋಗ್ಯ ವಿಚಾರಿಸಿ ಬಸ್ಸಿನಲ್ಲಿ ಬೆಂಗಳೂರಿಗೆ ತೆರಳಿದ್ದರು.

ಈ ವಿಚಾರ ಇಲ್ಲಿಗೆ ಮುಕ್ತಾಯಗೊಂಡು ಹೆಚ್ಚು ಸುದ್ದಿಯಾಗಿರಲಿಲ್ಲ. ಆದರೆ ಅ. 17ರಂದು ಹೇಮಾವತಿ ಅವರು ತಮ್ಮ ತಾಯಿಯನ್ನು ಕರೆದುಕೊಂಡು ಮಂಗಳೂರು ಕೆಎಂಸಿ ಆಸ್ಪತ್ರೆಯ ಡಾ. ಪದ್ಮನಾಭ ಕಾಮತ್‌ ಅವರ ಬಳಿಗೆ ಬಂದಿದ್ದರು. ಅದೇ ಸಮಯದಲ್ಲಿ ಅಂದು ತನ್ನಿಂದ ರಕ್ಷಿಸಲ್ಪಟ್ಟ ವ್ಯಕ್ತಿಯೂ ಚೇತರಿಸಿಕೊಂಡು ವೈದ್ಯರ ಬಳಿಗೆ ಬಂದಿದ್ದರು. ಆ ವ್ಯಕ್ತಿಯು ಡಾ. ಕಾಮತ್‌ ಅವರ ಬಳಿ ತನ್ನನ್ನು ಕಾಪಾಡಿದ ಮಹಾನ್‌ ತಾಯಿ ಇವರೇ ಎಂದು ವೈದ್ಯರಿಗೆ ಪರಿಚಯಿಸಿದರು. ಡಾ. ಕಾಮತ್‌ ಅವರು ಉಪನ್ಯಾಸಕಿಯ ಮಾನವೀಯ ಕಾರ್ಯವನ್ನು ಮೆಚ್ಚಿ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.

- Advertisement -

Related news

error: Content is protected !!