

ಮಂಗಳೂರು : ಮೂಡುಬಿದಿರೆ ಇನ್‌ಸ್ಪೆಕ್ಟರ್ ಸಂದೇಶ ಪಿ.ಜಿ ದುರ್ನಡತೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.



ಇನ್‌ಸ್ಪೆಕ್ಟರ್ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳದ ಆರೋಪಗಳು ದುರುದ್ದೇಶಪೂರಿತವಾಗಿದೆ. ಮಂಗಳೂರು ನಗರ ಉಪವಿಭಾಗ ಎಸಿಪಿ ಶ್ರೀಕಾಂತ್ ಅವರು ಪ್ರಕರಣಕ್ಕೆ ಸಂಬಂಧಿಸಿ ಪ್ರಾಥಮಿಕ ತನಿಖೆ ವರದಿ ನೀಡಿದ್ದು, ಅದರಲ್ಲಿ ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್ ಮಾಡಿದ ಆರೋಪಕ್ಕೆ ಪೂರಕವಾಗಿ ಯಾವುದೇ ಸತ್ಯಾಂಶ ಹಾಗೂ ಪೂರಕವಾದ ಸಾಕ್ಷ್ಯಾಧಾರಗಳು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.

ವೈರಲ್ ವಿಡಿಯೋ ಬಗ್ಗೆ ದೂರು ನೀಡಿಲ್ಲ:
25 ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋ ಮತ್ತು ವಿಡಿಯೋ ತಮ್ಮದೆಂದು ಮಹಿಳೆಯರು ಒಪ್ಪಿಕೊಂಡಿದ್ದಾರೆ. ಆದರೆ ಯಾವುದೇ ದೂರು ನೀಡಿಲ್ಲ. ಅಧಿಕಾರಿಯ ವಿರುದ್ಧ ಆಡಿಯೋ, ವಿಡಿಯೋಗಳಲ್ಲಿ ಕಂಡು ಬಂದಿರುವ ದುರ್ನಡತೆ ಗಂಭೀರವಾಗಿ ಪರಿಗಣಿಸಿ ಈಗಾಗಲೇ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ವೈಯಕ್ತಿಕ ದ್ವೇಷಕ್ಕಾಗಿ ಸುಳ್ಳು ದೂರುಗಳನ್ನು ನೀಡಿ ತನಿಖೆಯ ಹಾದಿ ತಪ್ಪಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.ಠಾಣೆಗೆ ಬರುವ ಮಹಿಳೆಯರ ರಕ್ಷಣೆ ಮತ್ತು ಅವರೊಂದಿಗೆ ಗೌರವಯುತವಾಗಿ ವರ್ತಿಸುವುದು ಪೊಲೀಸರ ಆದ್ಯ ಕರ್ತವ್ಯ ಈ ಘಟನೆಯಿಂದ ಇಡೀ ಇಲಾಖೆಗೆ ಪಾಠವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ವರ್ತನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.








