Saturday, July 25, 2026
spot_imgspot_img
spot_imgspot_img

ಕಾಂತಾರ ಚಾಪ್ಟರ್‌-1 ಚಿತ್ರದ ದೈವಪಾತ್ರಗಳನ್ನು ಅಪಹಾಸ್ಯ; ರಣವೀರ್ ಸಿಂಗ್‌ ಕ್ಷಮೆಯಾಚಿಸಿ, ದೇವಸ್ಥಾನಕ್ಕೂ ಭೇಟಿ ನೀಡಲಿದ್ದಾರೆ : ಹೈಕೋರ್ಟ್‌ಗೆ ವಕೀಲರ ಹೇಳಿಕೆ

- Advertisement -
- Advertisement -

ಬೆಂಗಳೂರು : ಕಾಂತಾರ ಚಾಪ್ಟರ್‌-1 ಚಿತ್ರದ ದೈವಪಾತ್ರಗಳನ್ನು ಅಪಹಾಸ್ಯ ಮಾಡಿ, ಧಾರ್ಮಿಕ‌ ಭಾವನೆಗಳಿಗೆ ಧಕ್ಕೆ ತಂದ ಆರೋಪಕ್ಕೆ ಗುರಿಯಾಗಿರುವ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ತಮ್ಮ ಕೃತ್ಯಕ್ಕೆ ಕ್ಷಮೆಯಾಚಿಸಿ ಪ್ರಮಾಣಪತ್ರ ಸಲ್ಲಿಸುವ ಜತೆಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಾರೆ ಎಂದು ರಣವೀರ್ ಪರ ಹಿರಿಯ ವಕೀಲ ಸಜನ್ ಪೂವಯ್ಯ ಹೈಕೋರ್ಟ್‌ಗೆ ತಿಳಿಸಿದರು.

ಪ್ರಕರಣ ಸಂಬಂಧ ನಗರದ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ದಾಖಲಾಗಿರುವ ಖಾಸಗಿ ದೂರು ಹಾಗೂ ಹೈಗ್ರೌಂಡ್ಸ್‌ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ರಣವೀರ್ ಸಿಂಗ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಖಾಸಗಿ ದೂರುದಾರರಾದ ಪ್ರಶಾಂತ್‌ ಮೆಥಲ್‌ ಪರ ವಕೀಲ ಸಿಜಿ ಮಲಯಾಳಿ ಅವರು, ರಣವೀರ್‌ ಸಿಂಗ್‌ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿ ಕ್ಷಮೆ ಕೇಳಿದ್ದಾರೆ. ಆದರೆ, ಅದರಲ್ಲಿ ಪ್ರಾಮಾಣಿಕತೆ ಕಾಣುವುದಿಲ್ಲ. ಹೃದಯಪೂರ್ವಕವಾಗಿ ಅವರು ಕ್ಷಮೆಯಾಚಿಸಿಲ್ಲ. ಅವರ ಮ್ಯಾನೇಜರ್‌ಗಳು ಟ್ವೀಟ್‌ ಮಾಡಿದ್ದಾರೆ. ಚಾವುಂಡಿ ದೈವವನ್ನು ‘ಹೆಣ್ಣು ದೆವ್ವ’ ಎಂದು ಕರೆದಿದ್ದಾರೆ. ಮೌಖಿಕವಾಗಿ ದೈವಕ್ಕೆ ಅಪಮಾನ ಮಾಡಿರುವುದರಿಂದ ಅವರು ಮೌಖಿಕವಾಗಿ ಕ್ಷಮೆ ಕೋರಬೇಕು. ಚಾಮುಂಡಿ ಬೆಟ್ಟಕ್ಕೆ ಸಜನ್‌ ಪೂವಯ್ಯ ಅವರ ಜತೆ ಹೋಗಿ ರಣವೀರ್‌ ಅಲ್ಲಿಯೇ ಕ್ಷಮೆ ಕೋರಲಿ ಎಂದರು.

ಆಗ ನ್ಯಾಯಪೀಠ, ಕ್ಷಮೆ ಕೋರಿ ಪ್ರಮಾಣಪತ್ರ ಸಲ್ಲಿಸುವುದಾಗಿ ಅರ್ಜಿದಾರರು ಹೇಳುತ್ತಿದ್ದಾರೆ. ಇನ್ನೇನು ಬೇಕು? ಅರ್ಜಿದಾರರು ಮಾಡಿರುವುದು ಸರಿಯಲ್ಲ. ಅದನ್ನು ಬೆಂಬಲಿಸುವುದಿಲ್ಲ. ನ್ಯಾಯಾಲಯಕ್ಕೆ ಬಂದು ಕ್ಷಮೆ ಕೋರಬೇಕು ಎಂದು ನೀವು (ದೂರುದಾರರು) ಬಯಸುತ್ತಿದ್ದೀರಾ? ಪ್ರಮಾದವಾಗಿದೆ. ರಣವೀರ್‌ ದೇವಾಲಯಕ್ಕೆ ಭೇಟಿ ನೀಡಬೇಕು. ಪಶ್ಚಾತಾಪ ವ್ಯಕ್ತಪಡಿಸುವ ಮನಸ್ಸಿರಬೇಕು. ನಟರು ಪ್ರಭಾವ ಬೀರುವ ಹೆಚ್ಚು ಶಕ್ತಿಯನ್ನು ಹೊಂದಿರುತ್ತಾರೆ ಎಂದು ನುಡಿಯಿತು.

ರಣವೀರ್‌ ಪರ ಹಿರಿಯ ವಕೀಲ ಸಜನ್‌ ಪೂವಯ್ಯ ಅವರು, ಕ್ಷಮೆ ಕೋರಿ ರಣವೀರ್‌ ಪ್ರಮಾಣಪತ್ರ ಸಲ್ಲಿಸಲಿದ್ದಾರೆ. ಹಾಗೆಯೇ ದೇವಸ್ಥಾನಕ್ಕೂ ಭೇಟಿ ನೀಡುತ್ತಾರೆ. ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನು ಆಲಿಸಿದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಏಪ್ರಿಲ್‌ 10ಕ್ಕೆ ಮುಂದೂಡಿತು.

- Advertisement -

Related news

error: Content is protected !!