




ಬೆಂಗಳೂರು: ರಾಜ್ಯದ ಜನತೆ ಹಲ್ಲಿನ ರೂಟ್ ಕೆನಾಲ್ ಅನ್ನು ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಜನ ಆರೋಗ್ಯ- ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ (ಪಿಎಂಜೆಎವೈ ಆ್ಯಂಡ್ ಸಿಎಂ ಎಆರ್‌ಕೆ) ಮಾಡಿಸಿಕೊಳ್ಳಲು ಅವಕಾಶವಾಗುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಇನ್ನು ಮುಂದೆ ಈ ಚಿಕಿತ್ಸೆಗೂ ವಿಮೆ ಅನ್ವಯವಾಗಲಿದೆ.
ಹೆಚ್ಚಿನ ಚಿಕಿತ್ಸಾ ವೆಚ್ಚ ಮತ್ತು ಜಾಗೃತಿ ಕೊರತೆಯಿಂದಾಗಿ ಗಮನಾರ್ಹ ಪ್ರಮಾಣದ ರೋಗಿಗಳು ರೂಟ್ ಕೆನಾಲ್ ಬದಲಿಗೆ ದಂತ ತೆಗೆಯುವ ಚಿಕಿತ್ಸಾ ವಿಧಾನವನ್ನೇ ಆರಿಸಿಕೊಳ್ಳುತ್ತಿದ್ದಾರೆ ಎಂದು ಅಧ್ಯಯನಗಳು ತಿಳಿಸುತ್ತಿವೆ. ಹೀಗಾಗಿ, ಆರೋಗ್ಯ ಕರ್ನಾಟಕ ಯೋಜನೆಯಡಿ ಇದನ್ನು ಸೇರಿಸುವುದರಿಂದ ಬಡವರಿಗೆ ಅನುಕೂಲವಾಗಲಿದೆ. ಜತೆಗೆ, ಹಲ್ಲಿನ ಸಂರಕ್ಷಣೆಯನ್ನು ಉತ್ತೇಜಿಸಿದಂತಾಗಲಿದೆ.
ಈ ಯೋಜನೆಯಡಿ ದಂತ, ಮೌಖಿಕ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಶೇಷತೆಯ 12 ಸಮಸ್ಯೆಗೆ ಚಿಕಿತ್ಸೆಯಿದೆ. ಆದಾಗ್ಯೂ, ಅಸ್ತಿತ್ವದಲ್ಲಿರುವ ಪ್ಯಾಕೇಜ್‌ನಲ್ಲಿ ರೂಟ್ ಕೆನಾಲ್ ಚಿಕಿತ್ಸಾ ವಿಧಾನ ಇರಲಿಲ್ಲ. ಹೀಗಾಗಿ, ಪಿಎಂಜೆಎವೈ ಆ್ಯಂಡ್ ಸಿಎಂ ಎಆರ್‌ಕೆ ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಆದ್ಯತಾ ಕುಟುಂಬ (ಪಿಎಚ್‌ಎಚ್) ಮತ್ತು ಆದ್ಯತೆಯಿಲ್ಲದ ಕುಟುಂಬದವರ (ಎಚ್‌ಪಿಎಚ್‌ಎಚ್) ರೂಟ್ ಕೆನಾಲ್ ಚಿಕಿತ್ಸೆಗಾಗಿ ಈ ಯೋಜನೆಯಡಿ ರೂಟ್‌ಕೆನಾಲ್ ಕಾರ್ಯವಿಧಾನವನ್ನು ಸೇರಿಸಲು ಆರೋಗ್ಯ ಇಲಾಖೆಯು ಅನುಮೋದನೆ ನೀಡಿದೆ. ಹೀಗಾಗಿ, ಈ ಚಿಕಿತ್ಸೆಗೂ ವಿಮೆ ಅನ್ವಯವಾಗಲಿದ್ದು, ದುಬಾರಿ ಹಣ ವ್ಯಯಿಸುವುದು ತಪ್ಪಲಿದೆ ಎಂದು ಮಾಹಿತಿ ತಿಳಿದು ಬಂದಿದೆ.








