Wednesday, July 22, 2026
spot_imgspot_img
spot_imgspot_img

ಮೃತರ ಹೆಸರಲ್ಲಿ ಕೋಟ್ಯಂತರ ರೂಪಾಯಿ ಲೂಟಿ; ತಾ.ಪಂ. ಸಿಬ್ಬಂದಿ ಅಮಾನತು!

- Advertisement -
- Advertisement -

ತುಮಕೂರು: ಮೃತರ ಮತ್ತು ನಿವೃತ್ತರಾದವರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ಲೂಟಿ ಮಾಡಿದ ಅಕ್ರಮ ಘಟನೆ ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಡೆದಿದ್ದು, ಮಧುಗಿರಿ ತಾಲೂಕು ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಸೌಮ್ಯ ಅವರನ್ನು ಅಮಾನತು ಮಾಡಲಾಗಿದೆ.

ಪಂಚಾಯಿತಿ ವ್ಯಾಪ್ತಿಯ ನಿವೃತ್ತಿ ಮತ್ತು ಮರಣ ಹೊಂದಿದ ನೌಕರರ ಗಳಿಕೆ ರಜೆ ನಗದೀಕರಣ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದರ ಬಗ್ಗೆ ಅನುಮಾನ ಮೊದಲಿಗೆ ಮೂಡಿತ್ತು. ಬಳಿಕ ಬೆಂಗಳೂರಿನ ಕೇಂದ್ರ ಕಚೇರಿಯಿಂದ ನಡೆದ ಆಡಿಟ್ ವೇಳೆ ದಾಖಲೆಗಳಲ್ಲಿ ವ್ಯತ್ಯಾಸ ಪತ್ತೆಯಾಯಿತು. ಈ ಬಗ್ಗೆ ತಿಳಿದ ತುಮಕೂರು ಜಿಲ್ಲಾ ಪಂಚಾಯಿತಿ ಸಿಇಒ ಅಶ್ವಿಜಾ ಸಮಗ್ರ ಪರಿಶೀಲನೆ ಕೈಗೊಂಡಿದ್ದಾರೆ. ತನಿಖೆ ವೇಳೆ ನೌಕರರ ರೆಸಿಪಿಯಂಟ್ ಐಡಿ ಮತ್ತು ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆದಾರರ ಹೆಸರಿನಲ್ಲಿ ವ್ಯತ್ಯಾಸ ಕಂಡುಬಂದಿದೆ.

21 ನೌಕರರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, 18 ನಿವೃತ್ತ ಹಾಗೂ 3 ಮರಣ ಹೊಂದಿದ ನೌಕರರ ಹೆಸರನ್ನು ಬಳಸಿಕೊಂಡು ಅಕ್ರಮ ನಡೆದಿದ್ದು, ಸುಮಾರು ಐದು ವರ್ಷಗಳಿಂದ ನಡೆಸುತ್ತಿರುವ ಅವ್ಯವಹಾರ ಬಹಿರಂಗವಾಗಿದೆ.

29 ಬ್ಯಾಂಕ್ ಖಾತೆಗಳ ಮೂಲಕ 118 ವ್ಯವಹಾರಗಳ ಮೂಲಕ ಸುಮಾರು 4.24 ಕೋಟಿ ರೂ. ಸೌಮ್ಯ ಮತ್ತು ಆಕೆಯ ಕುಟುಂಬದ ಐದು ಸದಸ್ಯರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಹಣವನ್ನು ಹಂತ ಹಂತವಾಗಿ ವರ್ಗಾಯಿಸಿ ಅಂತಿಮವಾಗಿ ಕುಟುಂಬದ ಖಾತೆಗಳಿಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಪ್ರಕರಣದಲ್ಲಿ ಇತರ ಅಧಿಕಾರಿಗಳ ಭಾಗವಿದೆಯೇ ಎಂಬುದರ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!