ಬೆಂಗಳೂರು: ತನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, ಆರೋಪಿಯೇ ಮಗುವಿನ ಜೈವಿಕ ತಂದೆ ಎಂಬುದು ಡಿಎನ್‌ಎ ವರದಿಯಿಂದ ದೃಢಪಟ್ಟಿರುವ ಹಿನ್ನೆಲೆಯಲ್ಲಿ, ಯುವತಿ ಮತ್ತು ಮಗುವಿನ ಭವಿಷ್ಯದ ಬಗ್ಗೆ ಗಂಭೀರ ಕಾಳಜಿ ವ್ಯಕ್ತಪಡಿಸಿದ ಹೈಕೋರ್ಟ್, ಬಿಜೆಪಿ ಉಚ್ಚಾಟಿತ ಮುಖಂಡನ ಪುತ್ರ ಕೃಷ್ಣ ಜೆ. ರಾವ್‌ಗೆ ಕಠಿಣ ತರಾಟೆ ತೆಗೆದುಕೊಂಡಿದೆ.ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿ, “ತಂದೆಯಾದ ಬಳಿಕ ಮಗುವನ್ನು ಅನಾಥವನ್ನಾಗಿಸುವುದು ಹೇಗೆ ಸಮಂಜಸ? ಮಗು ಮತ್ತು ತಾಯಿಯನ್ನು ಬೀದಿಗೆ ತಳ್ಳುವುದು ನ್ಯಾಯವೇ?” ಎಂದು ಪ್ರಶ್ನಿಸಿದೆ. ಇದೇ ವೇಳೆ, “ತಂದೆಯಾಗಿ ಮಗುವಿನ ಆರೈಕೆ ಮಾಡುವುದು ಆರೋಪಿ ಕರ್ತವ್ಯವಲ್ಲವೇ?” ಎಂದು ಪ್ರಶ್ನಿಸಿದೆ.

ಡಿಎನ್‌ಎ ವರದಿಯನ್ನು ಉಲ್ಲೇಖಿಸಿದ ಪೀಠವು, ಆರೋಪಿಯೇ ಮಗುವಿನ ಜೈವಿಕ ತಂದೆ ಎಂಬುದು ಸ್ಪಷ್ಟವಾಗಿರುವುದರಿಂದ, ಸಂತ್ರಸ್ತೆಯನ್ನು ಮದುವೆಯಾಗುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟಿದೆ. ಜೊತೆಗೆ, ಯುವತಿಗೆ ಮಾಸಿಕ 10 ಸಾವಿರ ರೂಪಾಯಿ ಜೀವನಾಂಶ ನೀಡಲು ಆರೋಪಿ ಸಿದ್ಧನಿದ್ದಾನೆಯೇ ಎಂದು ಪ್ರಶ್ನಿಸಿದೆ.ಈ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ತಮ್ಮ ನಿಲುವು ತಿಳಿಸಲು ಆರೋಪಿ ಪರ ವಕೀಲರಿಗೆ ಸೂಚಿಸಿದ ನ್ಯಾಯಾಲಯ, ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿದೆ.ವಿಚಾರಣೆ ವೇಳೆ ಆರೋಪಿ ಪರ ವಕೀಲ ಪಿ.ಪಿ. ಹೆಗ್ಡೆ ಅವರು, “ಇದು ರಾಜಕೀಯ ವಿರೋಧಿಗಳ ಸಂಚು. ಆರೋಪಿಯ ತಂದೆಯ ತೇಜೋವಧೆ ಮಾಡಲು ಪ್ರಕರಣವನ್ನು ಬಳಸಿಕೊಳ್ಳಲಾಗಿದೆ” ಎಂದು ವಾದಿಸಿದರು.




ಆದರೆ, ಡಿಎನ್‌ಎ ವರದಿ ಆರೋಪಿಯ ವಿರುದ್ಧವೇ ಇರುವುದರಿಂದ, ನ್ಯಾಯಾಲಯವು ಈ ವಾದಕ್ಕೆ ಕಿಮ್ಮತ್ತಿಲ್ಲವೆಂದು ತೋರಿಸಿ, ಮಾನವೀಯ ದೃಷ್ಟಿಕೋನದಿಂದ ಮಗುವಿನ ಹಿತರಕ್ಷಣೆ ಮುಖ್ಯ ಎಂದು ಸೂಚಿಸಿತು.
ಪ್ರಕರಣದ ಹಿನ್ನೆಲೆ
ಪುತ್ತೂರಿನ ಬಿಜೆಪಿಯ ಉಚ್ಚಾಟಿತ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್, ಶಾಲಾ ದಿನಗಳಿಂದ ಪರಿಚಿತವಾಗಿದ್ದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಯುವತಿ ಗರ್ಭವತಿಯಾದಾಗ ಆರಂಭದಲ್ಲಿ ಮದುವೆಗೆ ನಿರಾಕರಿಸಿದ್ದ ಆತ, ನಂತರ ವಯಸ್ಸಿನ ನೆಪವೊಡ್ಡಿ ಮದುವೆಯನ್ನು ಮುಂದೂಡಿದ್ದ ಎಂದು ತಿಳಿದುಬಂದಿದೆ.ಮಗು ಜನಿಸಿದ ಬಳಿಕ ‘ಮಗು ನನ್ನದಲ್ಲ’ ಎಂದು ಹೇಳಿ ಮದುವೆಗೆ ನಿರಾಕರಿಸಿದ್ದರಿಂದ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬಳಿಕ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿ ವಿರುದ್ಧ ನ್ಯಾಯಾಲಯದ ಆದೇಶದಂತೆ ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು.
ಆರೋಪಿ, ಸಂತ್ರಸ್ತೆ ಹಾಗೂ ಮಗುವಿನ ರಕ್ತದ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಯಲ್ಲಿ ಕೃಷ್ಣ ಜೆ. ರಾವ್ ಅವರೇ ಮಗುವಿನ ತಂದೆ ಎಂಬುದು ದೃಢಪಟ್ಟಿದೆ. ಈ ಬೆಳವಣಿಗೆಯ ನಂತರವೂ ಮದುವೆಗೆ ಒಪ್ಪದಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ.
ಇದೇ ವೇಳೆ, ಪ್ರಮುಖ ಬಿಜೆಪಿ ನಾಯಕರಿಂದ ನಡೆದ ಸಂಧಾನ ಪ್ರಯತ್ನಗಳೂ ವಿಫಲವಾಗಿವೆ.
ಇದೀಗ, ಮಗುವಿನ ಹಿತರಕ್ಷಣೆ ದೃಷ್ಟಿಯಿಂದ ಹೈಕೋರ್ಟ್ ಯಾವ ರೀತಿಯ ಕಠಿಣ ಆದೇಶ ಹೊರಡಿಸಲಿದೆ ಎಂಬುದು ಏಪ್ರಿಲ್ 24ರ ಮುಂದಿನ ವಿಚಾರಣೆಯಲ್ಲಿ ಸ್ಪಷ್ಟವಾಗಲಿದೆ.








