

ಬೆಂಗಳೂರು: ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ-2005ರ ಅನುಷ್ಠಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲು, ನಿರ್ವಹಿಸಲು ಹಾಗೂ ಸಾರ್ವಜನಿಕರಿಗೆ ಒದಗಿಸಲು ಏಕರೂಪದ ಡಿಜಿಟಲ್ ವ್ಯವಸ್ಥೆ ಜಾರಿಗೊಳಿಸುವಂತೆ ಕರ್ನಾಟಕ ಮಾಹಿತಿ ಆಯೋಗಕ್ಕೆ (ಕೆಐಸಿ) ಹೈಕೋರ್ಟ್ ನಿರ್ದೇಶನ ನೀಡಿದೆ.

ಮಾಹಿತಿ ಒದಗಿಸದ ಆಯೋಗದ ಕ್ರಮ ಪ್ರಶ್ನಿಸಿ ಎನ್. ರಮೇಶ್ ಬಾಬು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.ನಾಗರಿಕರು ಆರ್‌ಟಿಐಗೆ ಸಂಬಂಧಿಸಿದ ಮಾಹಿತಿಯನ್ನು ಸುಲಭವಾಗಿ ಪಡೆಯುವಂತಾಗಲು ಕೆಐಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಕೇಂದ್ರೀಕೃತ ಎಲೆಕ್ಟ್ರಾನಿಕ್ ಸೂಚ್ಯಂಕ ವ್ಯವಸ್ಥೆ ರೂಪಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.ಈ ವ್ಯವಸ್ಥೆಯಲ್ಲಿ ವರ್ಷವಾರು ಸ್ವೀಕರಿಸಿದ, ವಿಲೇವಾರಿ ಮಾಡಿದ ಹಾಗೂ ತಿರಸ್ಕರಿಸಿದ ಆರ್‌ಟಿಐ ಅರ್ಜಿಗಳ ವಿವರ, ಮೊದಲ ಮತ್ತು ಎರಡನೇ ಮೇಲ್ಮನವಿಗಳ ಮಾಹಿತಿ, ವಿಧಿಸಲಾದ ದಂಡ ಹಾಗೂ ಮಾಹಿತಿ ನೀಡಲು ವಿಫಲವಾದ ಅಥವಾ ನಿರಾಕರಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ವಿರುದ್ಧ ಆರ್‌ಟಿಐ ಕಾಯ್ದೆಯ ಸೆಕ್ಷನ್ 20ರಡಿ ಶಿಫಾರಸು ಮಾಡಲಾದ ಶಿಸ್ತು ಕ್ರಮಗಳ ವಿವರಗಳನ್ನು ಒಳಗೊಂಡಿರಬೇಕು ಎಂದು ನ್ಯಾಯಪೀಠ ಸೂಚಿಸಿದೆ.

ರಾಜ್ಯದ ಪ್ರತಿಯೊಂದು ಇಲಾಖೆಯೂ ತನ್ನ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಪ್ರಾಧಿಕಾರಗಳನ್ನು ಗುರುತಿಸಿ, ಆರ್‌ಟಿಐ ಕಾಯ್ದೆಯ ಸೆಕ್ಷನ್ 25ರ ಅಡಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಬೇಕು. ದಾಖಲೆಗಳನ್ನು ನಿರಂತರವಾಗಿ ನವೀಕರಿಸುವ ಜವಾಬ್ದಾರಿಯನ್ನು ನಿರ್ದಿಷ್ಟ ಅಧಿಕಾರಿಗೆ ವಹಿಸಬೇಕು. ಮಾಹಿತಿಯನ್ನು ವಿದ್ಯುನ್ಮಾನ ರೂಪದಲ್ಲಿ ನಿರ್ವಹಿಸುವ ಮೂಲಕ ಕಡತಗಳನ್ನು ಕೈಯಾರೆ ಪರಿಶೀಲಿಸದೇ ಹುಡುಕಲು, ವಿಂಗಡಿಸಲು ಹಾಗೂ ಮರುಪಡೆಯಲು ಸಾಧ್ಯವಾಗುವಂತೆ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.ಕೆಐಸಿ ವೆಬ್‌ಸೈಟ್‌ನಲ್ಲಿ ಆರ್‌ಟಿಐ ಅನುಷ್ಠಾನ ಮತ್ತು ಅನುಸರಣೆಗೆ ಪ್ರತ್ಯೇಕ ವಿಭಾಗವಿದ್ದು, ಆಯೋಗದ ಕಾರ್ಯನಿರ್ವಹಣೆ, ಮೇಲ್ಮನವಿಗಳು, ದೂರುಗಳು, ದಂಡ ಹಾಗೂ ಕಾಯ್ದೆಯಡಿ ಮಾಡಲಾದ ಶಿಫಾರಸುಗಳ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಪ್ರಕಟಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಆರ್‌ಟಿಐ ಕಾಯ್ದೆಯಡಿ ಈಗಾಗಲೇ ಬಹಿರಂಗಪಡಿಸುವಿಕೆಯಿಂದ ವಿನಾಯಿತಿ ಪಡೆದಿರುವ ಮಾಹಿತಿಗೆ ಈ ನಿರ್ದೇಶನಗಳು ಅನ್ವಯಿಸುವುದಿಲ್ಲ. ಹೊಸದಾಗಿ ಯಾವುದೇ ಮಾಹಿತಿಗೆ ವಿನಾಯಿತಿ ಸೃಷ್ಟಿಸುವ ಉದ್ದೇಶವೂ ಇಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.








