
ವಿಟ್ಲ: ವಿಟ್ಲದ ಖ್ಯಾತ ವೈದ್ಯರು ಹಾಗೂ ಪುಷ್ಪಕ್ ಹೆಲ್ತ್ ಸೆಂಟರ್‌ನ ಸ್ಥಾಪಕರಾದ ಡಾ.ವಿ.ಕೆ. ಹೆಗ್ಡೆ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ 1987ರಿಂದ ನಿರಂತರವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ.ವಿ.ಕೆ. ಹೆಗ್ಡೆ ಅವರು ಗ್ರಾಮೀಣ ಹಾಗೂ ಅರೆನಗರ ಪ್ರದೇಶದ ಜನರಿಗೆ ಗುಣಮಟ್ಟದ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವ ಮೂಲಕ ಜನಮನ್ನಣೆ ಗಳಿಸಿದ್ದಾರೆ. ವೈದ್ಯಕೀಯ ಸೇವೆಯನ್ನು ಕೇವಲ ವೃತ್ತಿಯಾಗಿ ಪರಿಗಣಿಸದೆ, ಮಾನವೀಯ ಕಾಳಜಿ ಮತ್ತು ಸಾಮಾಜಿಕ ಬದ್ಧತೆಯೊಂದಿಗೆ ಜನರ ಆರೋಗ್ಯದ ಅಗತ್ಯಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ.


ಪುಷ್ಪಕ್ ಹೆಲ್ತ್ ಕೇರ್ ಮೂಲಕ ವೈದ್ಯಕೀಯ ಸಮಾಲೋಚನೆಯೊಂದಿಗೆ ಪ್ರಯೋಗಾಲಯ, ಔಷಧಾಲಯ, ಇಸಿಜಿ, ನೆಬ್ಯುಲೈಸೇಶನ್, ಡೇ-ಕೇರ್ ಸೇರಿದಂತೆ ವಿವಿಧ ರೋಗನಿರ್ಣಯ ಮತ್ತು ಆರೋಗ್ಯ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ವ್ಯವಸ್ಥೆ ರೂಪಿಸಿದ್ದಾರೆ. ಇದರಿಂದ ವಿಟ್ಲ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರಿಗೆ ಸ್ಥಳೀಯವಾಗಿಯೇ ಅಗತ್ಯ ಪ್ರಾಥಮಿಕ ಆರೋಗ್ಯ ಸೇವೆ ಪಡೆಯಲು ಅನುಕೂಲವಾಗಿದೆ.
ವೈದ್ಯಕೀಯ ವೃತ್ತಿಯ ಜೊತೆಗೆ ರೋಟರಿ ಸಂಸ್ಥೆ ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಿಗೆ ದೀರ್ಘಕಾಲದಿಂದ ಕೊಡುಗೆ ನೀಡುತ್ತಿದ್ದಾರೆ.

ವಿಶೇಷವಾಗಿ ಕೋವಿಡ್-19 ಮಹಾಮಾರಿಯ ಸಂಕಷ್ಟದ ಸಂದರ್ಭದಲ್ಲಿ ವೈದ್ಯಕೀಯ ಸೇವೆಯ ನಿರಂತರತೆಯನ್ನು ಕಾಪಾಡಿಕೊಂಡು, ಅಗತ್ಯವಿರುವ ರೋಗಿಗಳಿಗೆ ವೈದ್ಯಕೀಯ ಸಲಹೆ, ಚಿಕಿತ್ಸೆ, ಮಾರ್ಗದರ್ಶನ ಹಾಗೂ ಸೂಕ್ತ ಆಸ್ಪತ್ರೆಗಳಿಗೆ ರೆಫರಲ್ ನೆರವು ನೀಡುವ ಮೂಲಕ ಸೇವಾ ಬದ್ಧತೆ ಮೆರೆದಿದ್ದರು.
ಸುಮಾರು ನಾಲ್ಕು ದಶಕಗಳ ವೈದ್ಯಕೀಯ ಸೇವೆ, ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ತಲುಪಿಸುವಲ್ಲಿ ತೋರಿದ ಕಾಳಜಿ ಹಾಗೂ ಸಮಾಜಮುಖಿ ಕಾರ್ಯಗಳನ್ನು ಪರಿಗಣಿಸಿ ಡಾ.ವಿ.ಕೆ. ಹೆಗ್ಡೆ ಅವರನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.








