




ಬೀದರ್: ರಸ್ತೆ ದಾಟುವಾಗ ವೇಗವಾಗಿ ಬಂದ ಕಾರೊಂದು ಡಿಕ್ಕಿಯಾದ ಪರಿಣಾಮ 9 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ್ ನಗರದ ಮಾಂಗರ್ ವಾಡಿ ಗಲ್ಲಿ ಬಳಿ ನಡೆದಿದೆ.
ರುದ್ರ(9) ಮೃತ ಬಾಲಕ. ಮಾರುತಿ ಸುಜ಼ುಕಿ ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಮೃತ ಬಾಲಕ ಅಂಗಡಿಯಿಂದ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಕಾರೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರು ಚಾಲಕ ಪರಾರಿಯಾಗಿದ್ದಾನೆ.
ಚಾಚಾ ಹೋಟೆಲ್‌ನಲ್ಲಿ ಕೆಲಸ ಮಾಡುವ ಯುವಕನಿಂದ ಈ ಕೃತ್ಯ ನಡೆದಿದ್ದು, ಅಪಘಾತದ ಬಳಿಕ ಚಾಚಾ ಹೋಟೆಲ್ ಬಳಿ ಬಾಲಕನ ಕಡೆಯವರು ಮತ್ತು ಹೋಟೆಲ್ ಕಡೆಯವರು ಜಮಾವಣೆಯಾಗಿ ಕೆಲವೊತ್ತು ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಾಲಕನ ಮೃತದೇಹವನ್ನು ಬ್ರೀಮ್ಸ್ ಶವಾಗಾರಕ್ಕೆ ರವಾನಿಸಲಾಗಿದೆ.
ಸ್ಥಳಕ್ಕೆ ಪಿಎಸ್‌ಐಗಳು, ಡಿಆರ್ ವ್ಯಾನ್ ಸೇರಿದಂತೆ ಪೊಲೀಸರು ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಯಾಗದಂತೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸುತ್ತಿದ್ದು, ಮಗುವನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರು ಹಾಕಿ, ನ್ಯಾಯ ಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.








