





ಬೆಂಗಳೂರು : ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮಲ್ಲೇಶ್ವರದ ಪೊಲೀಸ್ ವಸತಿಗೃಹದ ಜಾಗವನ್ನು ಕಬಳಿಸಲು ಯತ್ನಿಸಿದ್ದ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಸೇರಿದಂತೆ ಮೂವರನ್ನು ಇಲ್ಲಿನ ಮಲ್ಲೇಶ್ವರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಶಿವಮೊಗ್ಗದ ಬಿಜೆಪಿ ಮುಖಂಡ ಶ್ರೀನಾಥ್ ನಗರಗದ್ದೆ, ತುಮಕೂರಿನ ಕೃಷ್ಣಮೂರ್ತಿ ಹಾಗೂ ಮೈಸೂರಿನ ಕಿಶನ್ ಎಂಬುವರು ಬಂಧಿತ ಆರೋಪಿಗಳು ಗುರುತಿಸಲಾಗಿದೆ.ಬೆಂಗಳೂರು ದಕ್ಷಿಣ ಜಿಲ್ಲೆಯ ಲೋಕಾಯುಕ್ತ ಇನ್‍ಸ್ಪೆಕ್ಟರ್ ಎಂ.ಕುಮಾರ್ ಅವರು ನೀಡಿದ ದೂರಿನನ್ವಯ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿತ್ತು. ಸದ್ಯ, ವಿವಿಧೆಡೆ ಕಾರ್ಯಾಚರಣೆ ನಡೆಸಿ, ಈ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಸುಮಾರು 80 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಪೊಲೀಸ್ ವಸತಿಗೃಹ ತೆರವು ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಉತ್ತರ ವಿಭಾಗದ ಡಿಸಿಪಿ ಅವರು ಪ್ರಸ್ತಾವ ಸಲ್ಲಿಸಿದ್ದರು ಅದೇ ಜಾಗವನ್ನು ಕಬಳಿಸಲು ಈ ತಂಡವು ಮುಂದಾಗಿತ್ತು ಎಂದು ಮೂಲಗಳು ತಿಳಿಸಿವೆ.ಆರೋಪಿ ಶ್ರೀನಾಥ್ ನಗರಗದ್ದೆಯೇ ಈ ಪ್ರಕರಣದ ಸೂತ್ರಧಾರ ಎನ್ನಲಾಗಿದ್ದು, ಮಾಜಿ ಸಚಿವರೊಬ್ಬರ ಶಿವಮೊಗ್ಗದ ಕಚೇರಿಯಲ್ಲೂ ಶ್ರೀನಾಥ್ ಕೆಲಸ ಮಾಡಿದ್ದರು ಎಂದು ತಿಳಿದುಬಂದಿದೆ.








