



ತುಮಕೂರು: ಚಿನ್ನಾಭರಣಗಳನ್ನು ದೋಚಲು ವೃದ್ಧೆಯೊಬ್ಬರನ್ನು ಹತ್ಯೆಗೈದ ಘಟನೆ ತುಮಕೂರು ಜಿಲ್ಲೆಯ ಉಜ್ಜಿನಿ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಅದೇ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪೊಲೀಸರು ಬಂಧಿಸಿದ್ದಾರೆ. ಮುತ್ತುರಾಜ್(50) ಬಂಧಿತ ಆರೋಪಿ.
ಸೋಮವಾರ(ಮಾ.10) ರಾತ್ರಿ ಈ ಕೃತ್ಯ ನಡೆದಿದ್ದು, ಉಜ್ಜಿನಿ ಗ್ರಾಮದ ನಿವಾಸಿ ನಾಗಮ್ಮ(73) ಎಂಬ ವೃದ್ಧೆ ತಮ್ಮ ಮನೆಯಲ್ಲಿ ಒಂಟಿಯಾಗಿದ್ದಾಗ, ಮುತ್ತುರಾಜ್ ಮನೆಗೆ ನುಗ್ಗಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಆರೋಪಿ ಮುತ್ತುರಾಜ್ ಮೃತ ನಾಗಮ್ಮ ಬಳಿ ತನ್ನ ಜೂಜಾಟದ ಚಟದಿಂದ 1 ಕೋಟಿ ರೂ ಸಾಲ ಮಾಡಿಕೊಂಡಿದ್ದ. ಸಾಲ ಮರಳಿಸುವಂತೆ ನಾಗಮ್ಮ ಪದೇ ಪದೇ ಕೇಳುತ್ತಿದ್ದರಿಂದ, ಅವರನ್ನು ಹತ್ಯೆ ಮಾಡಿ ಅವರ ಬಳಿಯಿದ್ದ ಚಿನ್ನಾಭರಣಗಳನ್ನು ದೋಚಲು ಸಂಚು ರೂಪಿಸಿದ್ದನು. ಕೊಲೆಯ ನಂತರ ಮನೆಯೊಳಗೆ ಖಾರದ ಪುಡಿ ಎರಚಿ, ಮನೆಯ ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದನು. ಇದು ಕಳ್ಳರ ಕೃತ್ಯವೆಂದು ಬಿಂಬಿಸಲು ಈ ರೀತಿ ಕಥೆ ಕಟ್ಟಿದ್ದನು ಎನ್ನಲಾಗಿದೆ.
ನಾಗಮ್ಮ ಅವರ ಪುತ್ರ ವರದರಾಜು ನೀಡಿದ ದೂರಿನಂತೆ ಹುಲಿಯೂರುದುರ್ಗ ಪೊಲೀಸರು ತನಿಖೆ ನಡೆಸಿ, ತಾಂತ್ರಿಕ ದಾಖಲೆಗಳ ಆಧಾರದ ಮೇಲೆ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.








