Tuesday, July 21, 2026
spot_imgspot_img
spot_imgspot_img

ರಸ್ತೆ ಅಪಘಾತ: ವಿದ್ಯಾರ್ಥಿಗಳೇ ಇರಲಿ ಎಚ್ಚರ

- Advertisement -
- Advertisement -

ಮಕ್ಕಳ ಸಮಗ್ರ ಬೆಳೆವಣಿಗೆಯಲ್ಲಿ ಕೌಶಲಗಳು ಹಾಗೂ ಮೌಲ್ಯಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಮಾನವ ಸಂಘಜೀವಿ ಮತ್ತು ಬುದ್ದಿಜೀವಿ. ಆತನ ಆವಿಷ್ಕಾರಗಳಲ್ಲಿ ಸುಲಭ ಸೌಕರ್ಯಗಳ ಆವಿಷ್ಕಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ ಕಾರಣ ಜೀವನಶೈಲಿಯನ್ನು ಸರಳೀಕರಣಗೊಳಿಸಿಕೊಂಡಿರುತ್ತಾನೆ.

ನಾಗರೀಕತೆಯ ಉತ್ತುಂಗದಲ್ಲಿರುವ ಈತ ಈಗ ಹಕ್ಕಿಯಂತೆ ಹಾರಬಲ್ಲ, ಮೀನಿನಂತೆ ನೀರಿನಲ್ಲಿ ಈಜಬಲ್ಲ. ಅಂತಹ ವಾಹನ ಸೌಲಭ್ಯಗಳನ್ನು ಕಂಡುಹಿಡಿದ ಈತ ತನ್ನ ರಕ್ಷಣೆಯ ಬಗ್ಗೆ ಕೆಲವೊಮ್ಮೆ ಅಜಾಗರೂಕನಾಗುತ್ತಾನೆ. ಇಂದಿನ ಯುವ ಪೀಳಿಗೆಯ ಬಹುತೇಕ ಸಾವು-ನೋವುಗಳಿಗೆ ಮುಖ್ಯಕಾರಣ ರಸ್ತೆ ಅಪಘಾತಗಳು. ಆದಕಾರಣ ಇಂದಿನ ಮಕ್ಕಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಶಾಲಾ ಹಂತದಲ್ಲಿಯೇ ಇದರ ಅರಿವನ್ನು ಮಕ್ಕಳಲ್ಲಿ ಮೂಡಿಸಿ, ರಸ್ತೆ ಅಪಘಾತಗಳಿಗೆ ಕಾರಣಗಳಾವುವು? ಆ ಸಂದರ್ಭಗಳಲ್ಲಿ ಜವಾಬ್ದಾರಿಯುತ ನಾಗರೀಕನ ಕರ್ತವ್ಯವೇನು? ತಾನು ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳೇನು? ಸುರಕ್ಷತಾ ಕ್ರಮಗಳ ಪಾಲನೆ ಹೇಗೆ ಮಾಡಬೇಕು? ಈ ರೀತಿಯ ವಿಚಾರಗಳನ್ನು ಅರಿತುಕೊಳ್ಳುವ ಅವಶ್ಯಕತೆ ಹಾಗೂ ಅನಿವಾರ್ಯತೆಯಿದೆ. ಹಾಗಾದರೆ, ಇದನ್ನು ಸಾಧಿಸುವುದು ಹೇಗೆ ಎಂಬುದರತ್ತ ನಮ್ಮ ಗಮನವನ್ನು ಹರಿಸೋಣವೇ?

ವಿದ್ಯಾರ್ಥಿಗಳಿಗೆ ಈ ಪ್ರಮುಖ ವಿಚಾರಗಳ ಅರಿವಿರಲಿ:

  • ನಗರ/ಪಟ್ಟಣ ಪ್ರದೇಶಗಳಲ್ಲಿ ಎರಡು ರಸ್ತೆಗಳು ಕೂಡುವ ಜಾಗದಲ್ಲಿ ಬಿಳಿ/ಹಳದಿ ಬಣ್ಣದ ಗುರುತುಗಳನ್ನು ಗಮನಿಸಿ.
  • ಸಿಗ್ನಲಿನಲ್ಲಿರುವ ಬಣ್ಣಗಳನ್ನು ಗಮನಿಸಿ ರಸ್ತೆ ದಾಟಿ.
  • ವಾಹನಗಳು ಹಾರ್ನ್ ಏಕೆ ಹಾಕುತ್ತವೆ?
  • ನಿಂತಿರುವ ವಾಹನಗಳ ಮಧ್ಯದಿಂದ ರಸ್ತೆ ದಾಟುವುದು ಸುರಕ್ಷಿತವೇ?
  • ‘ಹೆದ್ದಾರಿ ಚಿಹ್ನೆಗಳು ಸದಾ ಸ್ಮರಣೆಯಲ್ಲಿರಲಿ’.
  • ರಸ್ತೆಯಲ್ಲಿ ಪಾದಚಾರಿಗಳು ಎಲ್ಲಿ ನಡೆಯಬೇಕು?
  • ರಸ್ತೆ ಮೇಲೆ ಶಾಂತವಾಗಿ ಏಕೆ ನಡೆಯಬೇಕು?
  • ರಸ್ತೆಯಲ್ಲಿ ಸಂಚರಿಸುವಾಗ ಹೇಗೆ ಎಚ್ಚರಿಕೆಯಿಂದ ಇರಬೇಕು?
  • ರಸ್ತೆಯಲ್ಲಿ ಏಕೆ ಆಟವಾಡಬಾರದು?
  • ರಸ್ತೆ ದಾಟುವ ಮುಂಚೆ ಎರಡೂ ಬದಿ ಏಕೆ ನೋಡಬೇಕು?
  • ಬಾಗಿರುವ ರಸ್ತೆಯಲ್ಲಿ ಏಕೆ ರಸ್ತೆ ದಾಟಬಾರದು?
  • ಬೈಕ್ ಅಥವಾ ಮೋಟರ್ ಸೈಕಲ್ ಚಲಾಯಿಸುವಾಗ ಹೆಲ್ಮೆಟ್ ಏಕೆ ಧರಿಸಬೇಕು?
  • ಕತ್ತಲಲ್ಲಿ ಸಂಚರಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಯಾವುವು?
  • ‘ರಸ್ತೆಯಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಬಿಟ್ಟು ಜೀವ ಉಳಿಸಿ’.
  • ವಾಹನಗಳಲ್ಲಿ ಪ್ರಯಾಣಿಕರಾಗಿ ಸಂಚರಿಸುವಾಗ ಪಾಲಿಸಬೇಕಾದ ಸುರಕ್ಷತಾ ಅಂಶಗಳು ಯಾವುವು?
  • ತಲೆ, ಕೈಯನ್ನು ವಾಹನಗಳಿಂದ ಏಕೆ ಹೊರ ಹಾಕಬಾರದು?
  • ರಸ್ತೆಯ ಅಕ್ಕ-ಪಕ್ಕದಲ್ಲಿ ಸುರಕ್ಷಿತವಾಗಿ ಹೇಗೆ ನಡೆಯಬೇಕು?
  • ಪಾದಾಚಾರಿ ರಸ್ತೆಯ ಬಳಕೆ ಏಕೆ ಮಾಡಬೇಕು ಮತ್ತು ಪಾದಾಚಾರಿ ರಸ್ತೆಯನ್ನು ಯಾವಾಗ ಬಳಸಬೇಕು?
  • ಊರಿನ ಮುಖ್ಯ ರಸ್ತೆಗಳ ಬದಿಗಳಲ್ಲಿ ಇರುವ ಸೂಚನಾ ಫಲಕಗಳನ್ನು ಗಮನಿಸಿ. ಅವುಗಳಿಂದ ಏನು ತಿಳಿಯುವುದು?
  • ಸಿಗ್ನಲ್‌ಗಳಲ್ಲಿ ಪೊಲೀಸರು ನಿರ್ವಹಿಸುವ ಕರ್ತವ್ಯಗಳೇನು? ನಾಗರೀಕರು ಅವರಿಗೆ ಹೇಗೆ ಸಹಕರಿಸಬೇಕು?
  • ಟ್ರಾಫಿಕ್ ಪೊಲೀಸ್ ದೂರವಾಣಿ ಸಂಖ್ಯೆ ಏನು?
  • ರಸ್ತೆಯನ್ನು ದಾಟುವಾಗ ಸುರಕ್ಷಿತವಾಗಿ ದಾಟಲು ಏನೇನು ಮಾಡಬೇಕು?
  • ರಸ್ತೆ ದಾಟುವಾಗ ಯಾವುದಾದರೂ ವಾಹನ ಬಂದರೆ ಏನು ಮಾಡಬೇಕು?
  • ಜೀಬ್ರಾ ಪಟ್ಟಿ, ಸಬ್ ವೇ ಅಥವಾ ಮೇಲ್ಸೇತುವೆಗಳನ್ನು ಬಳಸಿ ರಸ್ತೆಯನ್ನು ಏಕೆ ದಾಟಬೇಕು?
  • ರಸ್ತೆಯಲ್ಲಿ ವಾಹನಗಳಿದ್ದರೆ ಚಾಲಕನು ನೀವು ದಾಟುತ್ತಿರುವುದನ್ನು ನೋಡಿರುವುದನ್ನು ಖಾತ್ರಿಪಡಿಸಿಕೊಂಡು ದಾಟುವುದು.
  • ರಸ್ತೆ ದಾಟುವಾಗ ಕಣ್ಣು ಮತ್ತು ಕಿವಿಗಳು ಜಾಗೃತವಾಗಿರಬೇಕು.
  • ನಿಂತಿರುವ ಬಸ್/ಕಾರ್‌ನ ಮುಂದೆ ಅಥವಾ ಹಿಂದೆ ನಡೆಯಬಾರದು.
  • ಅಪಘಾತಗಳ ಸಂದರ್ಭದಲ್ಲಿ ಸಾಧ್ಯವಾದರೆ ಪ್ರಥಮ ಚಿಕಿತ್ಸೆಯನ್ನು ನೀಡುವುದು.
  • ಅಪ್ರಾಪ್ತ ಮಕ್ಕಳು ವಾಹನವನ್ನು ಚಾಲನೆ ಮಾಡಬಾರದು.
  • ರಸ್ತೆ ಬದಿಯಲ್ಲಿ ಸಾಕುಪ್ರಾಣಿಗಳನ್ನು ಮೇಯಲು/ಓಡಾಡಲು ಬಿಡಬಾರದು.
  • ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಬೇಕು.
  • ರಸ್ತೆಯ ಮೇಲೆ ಕೃಷಿ ಚಟುವಟಿಕೆಗಳನ್ನು ಮಾಡಬಾರದು.

ಈ ಎಲ್ಲಾ ಅಂಶಗಳ ಬಗ್ಗೆ ವಿದ್ಯಾರ್ಥಿ ಬದುಕಿನಲ್ಲಿಯೇ ಅರಿವನ್ನು ಮೂಡಿಸುವುದರ ಮೂಲಕ ಅಪಘಾತ ತಡೆಯಲು ಸಾಧ್ಯ. ‘ರಸ್ತೆಯ ನಿಯಮಗಳಿಗೆ ನಾನು ಬದ್ಧನಾಗಿರುತ್ತೇನೆ. ನನ್ನ ಸುರಕ್ಷಿತ ಜೀವನಕ್ಕೆ ನಾನೇ ಹೊಣೆಯಾಗಿರುತ್ತೇನೆ. ಇಲ್ಲಿ ನಾನು ಬದುಕಿ ಸಕಲ ಜೀವರಾಶಿಗಳನ್ನು ಬದುಕಲು ಬಿಡುತ್ತೇನೆ. ಇಲ್ಲಿನ ಸುರಕ್ಷತಾ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಿ, ಈ ದೇಶದ ಪ್ರಜ್ಞಾವಂತ ಪ್ರಜೆಯಾಗಿ ನಾನು ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ’ ಎಂದು ಪ್ರತಿಜ್ಞೆ ಮಾಡುವ ಮೂಲಕ ಅವಸರದ ಅತಿವೇಗದ ಅಪಾಯಕಾರಿ ಚಾಲನೆಯಿಂದ ಆದಷ್ಟು ದೂರ ಉಳಿಯಲು ಸಾಧ್ಯ. ಎಪಿಜೆ ಅಬ್ದುಲ್ ಕಲಾಂ ಅಂದಂತೆ ‘ನಿಮ್ಮಿಂದ ಮಹಾನ್ ಕೆಲಸಗಳನ್ನು ಮಾಡಲಾಗದಿದ್ದರೆ, ಸಣ್ಣ ಸಣ್ಣ ಕೆಲಸಗಳನ್ನೇ ಮಹಾನ್ ರೀತಿಯಲ್ಲಿ ಮಾಡೋಣ.’ ಇದರೊಂದಿಗೆ ಅರಿತುಕೊಂಡಿರುವ ವಿಷಯವನ್ನು ಸಹಪಾಠಿಗಳು, ಶಾಲೆಯ ಹೊರಗಿನ ಸ್ನೇಹಿತರು, ನೆರೆಹೊರೆಯವರು ಮತ್ತು ಕುಟುಂಬದ ಎಲ್ಲಾ ಸದಸ್ಯರೊಂದಿಗೆ ಹಂಚಿಕೊಂಡು ಅವರು ಕೂಡಾ ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಮಾಡಲು ಸಾಧ್ಯ.

ರಸ್ತೆ ಅಪಘಾತಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸಲು ವಿವಿಧ ಇಲಾಖೆಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಜೊತೆಗೆ ಶಾಲಾ ಪಠ್ಯಕ್ರಮದಲ್ಲಿಯೂ ಪಾಠಗಳನ್ನು ಅಳವಡಿಸಿದೆ. ಈ ಚಟುವಟಿಕೆಗೆ ಪೂರಕವಾಗಿ ಯೋಜನಾ ಕಾರ್ಯಗಳನ್ನು ನಿರ್ವಹಿಸಲು ವಿದ್ಯಾರ್ಥಿಗಳಿಗೆ ಸೂಚಿಸುವ ಮೂಲಕ ಅಂದರೆ ಮಕ್ಕಳಿಗೆ ರಸ್ತೆ ಸುರಕ್ಷತೆಯ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿ, ಉತ್ತಮ ಚಿತ್ರಗಳನ್ನು ತರಗತಿ ಕೋಣೆಯಲ್ಲಿ/ಶಾಲೆಯಲ್ಲಿ ಪ್ರದರ್ಶಿಸುವುದು. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪೊಲೀಸ್ ಇಲಾಖೆಯಿಂದ ನಡೆಸುವ “ರಸ್ತೆ ಸುರಕ್ಷತಾ ಸಪ್ತಾಹ”ದ ಮಹತ್ವವನ್ನು ತಿಳಿಸಲು ಕಾರ್ಯಕ್ರಮ ಆಯೋಜಿಸುವುದು. ಸ್ಥಳೀಯ ಪೊಲೀಸರಿಂದ ರಸ್ತೆ ಸುರಕ್ಷತಾ ಕ್ರಮಗಳ ಕುರಿತು ಸಂವಾದಗಳನ್ನು ಶಾಲಾ ಆವರಣದಲ್ಲಿ ಏರ್ಪಡಿಸುವುದು. ಮಕ್ಕಳು ತಮ್ಮ ಸುತ್ತಮುತ್ತಲಿನ ಜನರಿಗೂ ಸಹ ಇದರಿಂದ ಕಲಿತ ನೀತಿಗಳನ್ನು ತಿಳಿಹೇಳುವ ಮೂಲಕ, ಸಮಾಜಕ್ಕೆ ಉತ್ತಮ ಪ್ರಜೆಗಳಾಗುವ ಮೂಲಕ, ‘ಸುರಕ್ಷತೆ ಅನ್ನುವುದು ಘೋಷಣೆಯಲ್ಲ, ಅದು ಜೀವನಶೈಲಿ’ ಎಂಬುದರ ಅರಿವನ್ನು ಹೊಂದಿ ಮುನ್ನಡೆದಾಗ ಪ್ರಜ್ಞಾವಂತ ನಾಗರೀಕರಾಗಿ ದೇಶದ ಹೆಮ್ಮೆಯ ಕುಡಿಗಳಾಗಿ ಬೆಳಗಲು ಸಾಧ್ಯ.

✍️ಡಾ. ಮೈತ್ರಿ ಭಟ್, ವಿಟ್ಲ

- Advertisement -

Related news

error: Content is protected !!