



ವಿಟ್ಲ: ಖಾಸಗಿ ಬಸ್ ನಿಲ್ದಾಣದಲ್ಲಿ ಹಿಂದಕ್ಕೆ ಬರುತ್ತಿದ್ದ ಬಸ್ಸೊಂದು ನಿರ್ವಾಹಕರ ಬೇಜವಾಬ್ದಾರಿಯಿಂದ ಮಹಿಳೆಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.

ವಿಟ್ಲ–ಮುಡಿಪು–ಸ್ಟೇಟ್‌ಬ್ಯಾಂಕ್ ಮಾರ್ಗದಲ್ಲಿ ಸಂಚರಿಸುವ ‘ಮಹೇಶ್’ ಎಂಬ ಖಾಸಗಿ ಬಸ್ (KA 19 AF 4649) ನಿಲ್ದಾಣದಲ್ಲಿ ಹಿಂಬದಿಗೆ ಚಲಿಸುತ್ತಿದ್ದ ವೇಳೆ, ಮತ್ತೊಂದು ಬಸ್ಸಿನಿಂದ ಇಳಿದು ತೆರಳುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ತಗುಲಿ ಮಹಿಳೆ ಬಸ್ಸಿನ ಅಡಿಗೆ ಬೀಳುತ್ತಿದ್ದಂತೆಯೇ ಸ್ಥಳೀಯ ಜ್ಯೂಸ್ ಅಂಗಡಿ ಮಾಲಿಕ ರಘುಶೆಟ್ಟಿ ಹಾಗೂ ಆಟೋ ಚಾಲಕರು ಬೊಬ್ಬೆ ಹೊಡೆದು ಎಚ್ಚರಿಸಿದ ಪರಿಣಾಮ ಚಾಲಕ ತಕ್ಷಣವೇ ಬಸ್ ನಿಲ್ಲಿಸಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ.
ಗಾಯಗೊಂಡ ಮಹಿಳೆಯನ್ನು ಕೇಪು ಗ್ರಾಮದ ಕುದ್ದುಪದವು ಚೆಲ್ಯಡ್ಕ ನಿವಾಸಿ ಈಶ್ವರ ನಾಯ್ಕ ಅವರ ಪತ್ನಿ ಸುಶೀಲ (50) ಎಂದು ಗುರುತಿಸಲಾಗಿದೆ. ಅನಾರೋಗ್ಯದ ಹಿನ್ನೆಲೆ ಅವರು ವಿಟ್ಲದ ಸುರಕ್ಷಾ ಆಸ್ಪತ್ರೆಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದಿದ್ದರು. ಇದೇ ವೇಳೆ ತಮ್ಮ ನಾದಿನಿ ಜಯಾ ಅವರ ಬಳಿ ಹೋಗುವಾಗ ಈ ದುರ್ಘಟನೆ ನಡೆದಿದೆ.
ಅಪಘಾತದ ಬಳಿಕ ಸ್ಥಳೀಯ ರಿಕ್ಷಾ ಚಾಲಕರು ಹಾಗೂ ಸಾರ್ವಜನಿಕರು ತಕ್ಷಣ ಧಾವಿಸಿ ಬಸ್ಸಿನ ಅಡಿಯಲ್ಲಿ ಸಿಲುಕಿದ್ದ ಸುಶೀಲ ಅವರನ್ನು ರಕ್ಷಿಸಿ ವಿಟ್ಲ ಸರ್ಕಾರಿ ಸಮುದಾಯ ಆಸ್ಪತ್ರೆಗೆ ದಾಖಲಿಸಿದರು. ಅವರ ತಲೆ, ಕೈ ಭಾಗಗಳಿಗೆ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕಳುಹಿಸಲು ವೈದ್ಯರು ಸೂಚಿಸಿದ್ದಾರೆ.
ಈ ನಡುವೆ, ಜನಸಂದಣಿ ಹೆಚ್ಚಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ಸುಗಳನ್ನು ಹಿಂಬದಿಗೆ ಚಲಿಸುವ ವೇಳೆ ಚಾಲಕ ಮತ್ತು ನಿರ್ವಾಹಕರು ಮುನ್ನೆಚ್ಚರಿಕೆ ಕೈಗೊಳ್ಳದಿರುವುದೇ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಬೇಜವಾಬ್ದಾರಿತನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.








