



ಬೆಂಗಳೂರು: 2026-27ರ ಶೈಕ್ಷಣಿಕ ಸಾಲಿನಲ್ಲಿ 1ನೆ ತರಗತಿಯಪ್ರವೇಶ ವಯೋಮಿತಿಯಲ್ಲಿ ನೀಡಲಾಗಿರುವ 60 ದಿನಗಳ ವಿನಾಯಿತಿಯು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪಠ್ಯಕ್ರಮ (ಸಿಬಿಎಸ್‌ಇ, ಐಸಿಎಸ್‌ಇ ಒಳಗೊಂಡಂತೆ) ಶಾಲೆಗಳಿಗೂ ಅನ್ವಯಿಸುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಎಸ್‌ಇ ಮತ್ತು ಇತರೆ ರಾಜ್ಯಗಳ ಪಾಲಿಸಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು.

ಈ ಬಗ್ಗೆ ಈಗಾಗಲೇ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಲಾಗಿದೆ. ಇತರ ರಾಜ್ಯಗಳಲ್ಲಿನ ಶಿಕ್ಷಣ ಪದ್ಧತಿಯ ಮಾಹಿತಿಯನ್ನು ಕೋರಲಾಗಿದೆ ಎಂದರು.ಇಲಾಖೆಯಿಂದ ಸ್ಪಷ್ಟನೆ ದೊರೆತ ತಕ್ಷಣ ಈ ಕುರಿತಾದ ಗೊಂದಲಗಳು ಬಗೆಹರಿಯಲಿವೆ. ರಾಜ್ಯ ಶಿಕ್ಷಣ ನೀತಿಯ (ಎಸ್‌ಇಪಿ) ಶಿಫಾರಸುಗಳನ್ನು ಇನ್ನೂ ಸಚಿವ ಸಂಪುಟದ ಮುಂದೆ ಮಂಡಿಸಬೇಕಿದ್ದು, ಒಮ್ಮೆ ಅದನ್ನು ಮಂಡಿಸಿ ಅನುಮೋದನೆ ಪಡೆದ ನಂತರ ಅನ್ವಯವಾಗುವ ಮಾರ್ಗಸೂಚಿಗಳು ಮತ್ತು ಆದೇಶವನ್ನು ಹೊರಡಿಸುತ್ತೇವೆ. ಜತೆಗೆ ಕಿಂಡರ್ ಗಾರ್ಡನ್ ಪ್ರವೇಶದ ವಯೋಮಿತಿಗೆ ಸಂಬಂಧಿಸಿದಂತೆ ಸರಿಯಾದ ಮಾರ್ಗಸೂಚಿಗಳಿಲ್ಲದ ಕಾರಣ, ಪೋಷಕರಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ನಾವು ಸ್ಪಷ್ಟತೆ ನೀಡಬೇಕಾಗಿದೆ ಎಂದು ಅವರು ತಿಳಿಸಿದರು.









