
ಕಲಬುರಗಿ: ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ (ಆರ್.ಡಿ ಪಾಟೀಲ್) ಅವರನ್ನು ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೈಸೂರು ಜೈಲಿಗೆ ವರ್ಗಾಯಿಸಿದ್ದ ಕೆಳಹಂತದ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ಅವರು ಮತ್ತೆ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಮರು ವರ್ಗಾವಣೆಗೊಳ್ಳಲಿದ್ದಾರೆ.
ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಕಲಬುರಗಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜ.27ರಂದು ಮೈಸೂರು ಜೈಲಿಗೆ ವರ್ಗಾವಣೆ ಮಾಡಲು ಅನುಮತಿ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಆರ್.ಡಿ.ಪಾಟೀಲ್ ಅವರ ಪತ್ನಿ ಶುಭಾ ಅವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ (WP No. 200934/2026) ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ, ವಿಚಾರಣಾಧೀನ ಕೈದಿಯನ್ನು ವರ್ಗಾವಣೆ ಮಾಡುವ ಮುನ್ನ ಅವರಿಗೆ ಆಕ್ಷೇಪಣೆ ಸಲ್ಲಿಸಲು ಅಥವಾ ವಾದ ಮಂಡಿಸಲು ಅವಕಾಶ ನೀಡದೇ ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.
ಇದಲ್ಲದೆ, ವರ್ಗಾವಣೆಗೆ ‘ಭದ್ರತಾ ಕಾರಣ’ ಎಂಬ ಅಸ್ಪಷ್ಟ ಕಾರಣ ನೀಡಿರುವುದನ್ನು ಪ್ರಶ್ನಿಸಿದ ಹೈಕೋರ್ಟ್, ಜಿಲ್ಲಾ ನ್ಯಾಯಾಧೀಶರು ಸಮರ್ಪಕವಾಗಿ ವಿವೇಚನೆ ಬಳಸದೆ ಆದೇಶ ನೀಡಿರುವುದಾಗಿ ಹೇಳಿದೆ. ಪರಿಣಾಮವಾಗಿ, ಆರ್.ಡಿ ಪಾಟೀಲ್ ಅವರನ್ನು ತಕ್ಷಣ ಮೈಸೂರು ಜೈಲಿನಿಂದ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಮರು ವರ್ಗಾವಣೆ ಮಾಡುವಂತೆ ನಿರ್ದೇಶನ ನೀಡಲಾಗಿದೆ.








